ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದುಗಳ ಮಾರಣಹೋಮ ನಡೆಯುತ್ತಿದ್ದು, ಭಾರತ ಸರ್ಕಾರ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ನಡುವೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನಿವಾಸಿಗಳನ್ನು ಹೆಕ್ಕಿ ತೆಗೆಯುವ ಮಹತ್ತರ ಕೆಲಸಕ್ಕೆ ಕೈಹಾಕಿದೆ.
ದೆಹಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿರುವ 175 ಬಾಂಗ್ಲಾ ನಿವಾಸಿಗಳನ್ನು ಪತ್ತೆ ಮಾಡಿದೆ. 12 ಗಂಟೆ ಅವಧಿಯಲ್ಲಿ ನಡೆದ ತಪಾಸಣೆಯಲ್ಲಿ ಅಕ್ರಮ ವಲಸಿಗರನ್ನು ಗುರುತು ಮಾಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮಾನ್ಯ ದಾಖಲೆಗಳಿಲ್ಲದೆ ದೆಹಲಿಯ ಹೊರ ವಲಯದಲ್ಲಿ ವಾಸಿಸುತ್ತಿರುವ ಅಕ್ರಮ ವಲಸಿಗರನ್ನು ಗುರುತಿಸುವ ಮತ್ತು ಬಂಧಿಸುವ ಪ್ರಯತ್ನಗಳು ತೀವ್ರಗೊಂಡಿವೆ. ಕಾರ್ಯಾಚರಣೆಗಳ ಭಾಗವಾಗಿ ಇಂದು 175 ಶಂಕಿತ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು.
ದೆಹಲಿಯಲ್ಲಿ ಬಾಂಗ್ಲಾದ ಅಕ್ರಮ ವಲಸಿಗರನ್ನು ಪತ್ತೆ ಮಾಡಲು ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರು ಡಿಸೆಂಬರ್ 10 ರಂದು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು, ರಾಷ್ಟ್ರ ರಾಜಧಾನಿಯಲ್ಲಿ ದಾಖಲೆಗಳಿಲ್ಲದೇ ನೆಲೆಸಿರುವವನ್ನು ಪಟ್ಟಿ ಮಾಡುತ್ತಿದೆ.
ಅಕ್ರಮ ನಿವಾಸಿಗಳನ್ನು ಪತ್ತೆ ಮಾಡಲು ಸ್ಥಳೀಯ ಪೊಲೀಸ್ ಠಾಣೆಗಳು, ಜಿಲ್ಲಾ ಘಟಕಗಳ ಸಿಬ್ಬಂದಿ ಸೇರಿದಂತೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಅವರು, ಮನೆ ಮನೆ ತಪಾಸಣೆ ನಡೆಸಿ, ಶಂಕಿತ ಅಕ್ರಮ ವಲಸಿಗರ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಡಿಸೆಂಬರ್ 13 ರಂದು ಇಬ್ಬರು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಲಾಗಿದೆ. 1,000 ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಲಾಗಿದೆ. ಇಡೀ ರಾಷ್ಟ್ರ ರಾಜಧಾನಿಯಾದ್ಯಂತ 1,500 ಅಕ್ರಮ ಬಾಂಗ್ಲಾದೇಶಿ ವಲಸಿಗರು ಇದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ: ಕಾಲ್ತುಳಿತದ ವಿಡಿಯೋ ಬಿಡುಗಡೆ ಮಾಡಿದ ಖಾಕಿ