ಮುಂಬೈ: ಚಲಾವಣೆಯಲ್ಲಿರುವ 2,000 ರೂಪಾಯಿ ನೋಟುಗಳ ಒಟ್ಟು ಮೌಲ್ಯ 2024ರ ಜನವರಿ 31ರ ವಹಿವಾಟಿನ ಅಂತ್ಯಕ್ಕೆ 8,897 ಕೋಟಿ ರೂಪಾಯಿಗೆ ಇಳಿದಿದೆ. ಹೀಗಾಗಿ ಮೇ 19, 2023 ರ ವೇಳೆಗೆ ಚಲಾವಣೆಯಲ್ಲಿದ್ದ 2,000 ರೂ.ಮುಖ ಬೆಲೆಯ ನೋಟುಗಳ ಪೈಕಿ ಶೇಕಡಾ 97.50 ರಷ್ಟು ನೋಟುಗಳು ಹಿಂತಿರುಗಿವೆ ಎಂದು ಆರ್ಬಿಐ ಗುರುವಾರ ತಿಳಿಸಿದೆ.
ಮೇ 19, 2023 ರಂದು ವ್ಯವಹಾರದ ಕೊನೆಯಲ್ಲಿ ಚಲಾವಣೆಯಲ್ಲಿದ್ದ 2,000 ರೂ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂ. ಆಗಿತ್ತು. 2,000 ರೂ.ಗಳ ನೋಟುಗಳನ್ನು ಮೇ 19, 2023 ರಿಂದ ರಿಸರ್ವ್ ಬ್ಯಾಂಕಿನ (ಆರ್ಬಿಐ ವಿತರಣಾ ಕಚೇರಿಗಳು) 19 ವಿತರಣಾ ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಅಕ್ಟೋಬರ್ 9, 2023 ರಿಂದ ಆರ್ಬಿಐ ವಿತರಣಾ ಕಚೇರಿಗಳು ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ವ್ಯಕ್ತಿಗಳು / ಸಂಸ್ಥೆಗಳಿಂದ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಸ್ವೀಕರಿಸುತ್ತಿವೆ. ಇದಲ್ಲದೇ, ದೇಶದೊಳಗಿನ ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ದೇಶದ ಅಂಚೆ ಕಚೇರಿಗಳಿಂದ ಇಂಡಿಯಾ ಪೋಸ್ಟ್ ಮೂಲಕ ಯಾವುದೇ ಆರ್ಬಿಐ ವಿತರಣಾ ಕಚೇರಿಗಳಿಗೆ 2,000 ರೂ.ಗಳ ನೋಟುಗಳನ್ನು ಕಳುಹಿಸುತ್ತಿದ್ದಾರೆ ಎಂದು ಆರ್ಬಿಐ ತಿಳಿಸಿದೆ.