ಬೆಂಗಳೂರು: ತನ್ನ ಫೋನ್ ಟ್ಯಾಪಿಂಗ್ ಆಗಿರುವುದಾಗಿ ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇಂದು ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನನ್ನ ಫೋನ್ ಟ್ಯಾಪಿಂಗ್ ಮಾಡಿಸುತ್ತಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು. ಏಕೆಂದರೆ ನನ್ನನ್ನು ಕೊಂಡೊಯ್ಯುತ್ತಿರುವ ವೇಳೆ ನಾನು ದೂರವಾಣಿಯಲ್ಲಿ ಮಾತನಾಡಿರುವ ಬಗ್ಗೆ ಮೇಲಾಧಿಕಾರಿಗಳೇ ಕೇಳುತ್ತಿದ್ದರು. ಅವರು ಫೋನ್ನಲ್ಲಿ ಮಾತನಾಡುತ್ತಿದ್ದಾರೆ, ಫೋನ್ನಲ್ಲಿ ಮಾತನಾಡಲು ಏಕೆ ಅವಕಾಶ ನೀಡುತ್ತಿದ್ದೀರಿ ಎಂದು ಹೇಳುತ್ತಿರುವುದನ್ನು ನಾನು ಕೇಳಿಸಿಕೊಂಡಿದ್ದೇನೆ. ಹೀಗಾಗಿ ನನ್ನ ಫೋನ್ ಟ್ಯಾಪಿಂಗ್ ಆಗಿರುವ ಬಗ್ಗೆ ಅನುಮಾನ ಇದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ನ್ಯಾಯಾಂಗ ತನಿಖೆ ನಡೆಸಬೇಕು: ಪೊಲೀಸರ ನಡವಳಿಕೆ ಸಂಬಂಧ ನ್ಯಾಯಾಂಗ ತನಿಖೆ ನಡೆಸುವಂತೆ ಇದೇ ವೇಳೆ ಸಿ.ಟಿ. ರವಿ ಆಗ್ರಹಿಸಿದರು. ಏನೋ ಸಂಚು ನಡೆಸಿದ್ದರು ಎಂಬುದು ನನಗೆ ಅನುಮಾನ. ಬಹುಶಃ ಗುಂಪು ಸೇರಿಸಿ ನನ್ನನ್ನು ಸಾಯಿಸಲು ಸಂಚಿತ್ತು ಎಂಬುದು ನನ್ನ ಅನುಮಾನ. ಏಕೆಂದರೆ ಅವರೇ ಸುವರ್ಣಸೌಧದಲ್ಲೇ ಧಮ್ಕಿ ಹಾಕಿದ್ದರು. ಬಳಿಕ ಕೋರ್ಟ್ನಲ್ಲಿ ಇದೆಲ್ಲವನ್ನೂ ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟೆ. ನಾನು ಕೊಟ್ಟ ದೂರು ಸ್ವೀಕಾರ ಮಾಡಿಲ್ಲ. ಎಫ್ಐಆರ್ ಆಗಿಲ್ಲ. ನನ್ನ ಮೇಲಿನ ಹಲ್ಲೆಗೆ ವಿಡಿಯೋಗಳಿವೆ. ನೀವು ಮಾಡಿದ ಆರೋಪಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ಗೆ ವಿಶೇಷ ಹಕ್ಕು ಕೊಟ್ಟು, ನನ್ನ ಹಕ್ಕು ಕಸಿದುಕೊಂಡಿದ್ದೀರಿ. ಮಾನವ ಹಕ್ಕು ಉಲ್ಲಂಘನೆ ಮಾಡಿದ್ದೀರಿ. ನನಗೆ ನೋಟಿಸ್ ಕೊಟ್ಟಿಲ್ಲ. ಸಭಾಪತಿಯ ಅನುಮತಿ ಪಡೆದಿದ್ದೀರಾ?. ಇದೊಂದು ಷಡ್ಯಂತ್ರ ಇದ್ದಂತಿದೆ. ಡಿಸಿಎಂ ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ಆರೋಪ ಮಾಡಿದ್ದೇನೆ. ನನಗೆ ಈಗಲೂ ಜೀವ ಬೆದರಿಕೆ ಇದೆ. ನನಗೆ ಏನೇ ಆದರು ಅದಕ್ಕೆ ಅವರೇ ಜವಾಬ್ದಾರಿ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿ ಕಮಿಷನರ್ ಯಡಾ ಮಾರ್ಟಿನ್, ಎಸ್ಪಿ ಭೀಮಾಶಂಕರ್ ಗುಳೇದ್ ನಡೆ ನಿಗೂಢವಾಗಿತ್ತು. ಪೊಲೀಸರ ಕಾಲ್ ರೆಕಾರ್ಡ್ ತನಿಖೆ ಆಗಬೇಕು. ಸಿಎಂ, ಡಿಸಿಎಂ ಅಥವಾ ಲಕ್ಷ್ಮಿ ಹೆಬ್ಬಾಳ್ಕರ್ ಡೈರೆಕ್ಷನ್ ಕೊಡುತ್ತಿದ್ದರಾ?. ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಚಿದಂಬರಂ ಎಂಬ ರಾಮದುರ್ಗದ ಡಿವೈಎಸ್ಪಿ, ಕಿತ್ತೂರು ಪಿಎಸ್ಐ, ಗಂಗಾಧರ್ ಬೆಳಗಾವಿ ಮಾರುಕಟ್ಟೆ ಎಸಿಪಿ ಮೇಲೆ ಅನುಮಾನ ಇದೆ. ಅವರು ಕರೆ ಮಾಡುತ್ತಿದ್ದರು ಎಂಬುದು ನಮ್ಮ ಸಂಶಯ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಹಿಡನ್ ಅಜೆಂಡಾ ಜನರ ಮುಂದೆ ಬಂದಿದೆ. ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರುಗಳು, ಕೇಂದ್ರ ಸಚಿವರು, ಶಾಸಕರು, ಕಾರ್ಯಕರ್ತರು ನ್ಯಾಯ ಎತ್ತಿ ಹಿಡಿಯುಲು, ನನ್ನ ಕಷ್ಟ ಕಾಲದಲ್ಲಿ ಜೊತೆಗೆ ಇದ್ದರು. ನಾನು ಲಕ್ಷ್ಮಿ ಹೆಬ್ಬಾಳ್ಕರ್ ಎದುರು ಸಿಕ್ಕಾಗ ಏನು ಅಕ್ಕ ಚೆನ್ನಾಗಿ ಇದ್ದೀರಾ ಎಂದು ಕೇಳುತ್ತೇನೆ. ಯಾವತ್ತೂ ಆ ತರ ಮಾತನಾಡಿಲ್ಲ. ಸಭಾಪತಿ ಅವರು ರೂಲಿಂಗ್ ಕೊಟ್ಟಿದ್ದಾರೆ. ನಾನು ಏನು ಮಾತನಾಡಿದೆ, ಅವರು ಏನು ಮಾತನಾಡಿದ್ದಾರೆ ಎಂದು ದಾಖಲಾಗದೇ ಇರಬಹುದು. ಆದರೆ, ಎಲ್ಲವೂ ಅಂತರ ಆತ್ಮಕ್ಕೆ ಗೊತ್ತಾಗುತ್ತದೆ. ನಾನು ಕಾರಿನಿಂದ ಮೊದಲು ಇಳಿಯುವಾವ ಕಾರಿನ ಮೇಲಿನ ದಾಳಿ ಮಾಡಿದರು. ಆದಾದ ಬಳಿಕ ನನ್ನ ಮೇಲೆ ಈ ತರ ಆರೋಪ ಮಾಡಿರುವುದು ಗೊತ್ತಾಯಿತು. ಭಯ ಇಲ್ಲದ ಕಾರಣ ತಲೆಕೆಡಿಸಿಕೊಂಡಿಲ್ಲ ಎಂದರು.
ವಿಧಾನಸಭೆಗೆ ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಲು ಹೋಗಿದ್ದೆ. ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಿ ಹೊರಗೆ ಹೋದಾಗ ನಾಲ್ಕೈದು ಮಂದಿ ಬೆದರಿಕೆ ಜೊತೆಗೆ ಹಲ್ಲೆಗೆ ಯತ್ನಿಸಿದರು. ಹತ್ತು ನಿಮಿಷ ಕಾಲ ಬೆಂಬಲಿಗರು ಕೂಗಾಟ, ಬೆದರಿಕೆ ಹಾಕವುದು ಮಾಡಿದರು. ನಿನ್ನ ಹೆಣನೇ ಕಳಿಸುವುದು ಎಂದು ಬೆದರಿಕೆ ಹಾಕಿದರು. ಬಳಿಕ ನಾನು ಕಾರಿಡಾರ್ ನಲ್ಲೇ ಧರಣಿ ಕೂತೆ. ನಂತರ ಸಭಾಪತಿ ಕರೆದರು. ಅಲ್ಲಿಗೆ ಹೋಗಿ ಲಿಖಿತದಲ್ಲಿ ದೂರು ಕೊಡಲು ಕೇಳಿದರು. ಎಲ್ಲವನ್ನೂ ಕೊಟ್ಟೆವು. ಹೆಬ್ಬಾಳ್ಕರ್ ಅವರ ದೂರಿನ ಬಗ್ಗೆ ಸ್ಪಷ್ಟನೆ ನೀಡಿದೆ. ಸಮಜಾಯಿಷಿಯನ್ನು ಲಿಖಿತ ರೂಪದಲ್ಲಿ ಕೊಟ್ಟೆ ಎಂದರು.
ಬಳಿಕ ಡಿಸಿಎಂ, ಲಕ್ಷ್ಮಿ ಹೆಬ್ಬಾಳ್ಕರ್, ಚನ್ನರಾಜ ಹಟ್ಟಿ, ಏಕವಚನದಲ್ಲಿ ನನ್ನ ಕುಟುಂಬದ ಬಗ್ಗೆ ನಿಂದಿಸಿದರು. ನಿನ್ನ ಕಥೆ ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದರು. ಬಳಿಕ ಮಾರ್ಷಲ್ಗಳ ರಕ್ಷಣೆ ಮೇರೆಗೆ ಸ್ಪೀಕರ್ ಕಚೇರಿಗೆ ಹೋದೆ. ಅಲ್ಲಿ ಲಿಖಿತ ರೂಪದಲ್ಲಿ ದೂರು ನೀಡಿದೆ. ಎಡಿಜಿಪಿಯವರಿಗೆ ಸಿ.ಟಿ. ರವಿಗೆ ಯಾವುದೇ ತೊಂದರೆ ಆಗದಂತೆ, ಲೋಪವಾಗದಂತೆ ಮನೆಗೆ ಕಳುಹಿಸಕೊಡುವಂತೆ ಸೂಚನೆ ನೀಡಿದರು. ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು ಎಂದು ತಿಳಿಸಿದರು.
ನಾವು ಸುವರ್ಣಸೌಧದ ಮುಂದೆ ಧರಣಿ ಕೂತೆವು. ನನ್ನನ್ನು ಪ್ರತ್ಯೇಕವಾಗಿ ಕರೆದೊಯ್ದರು. ಮೊದಲಿಗೆ ನನ್ನನ್ನು ಹಿರೇಬಾಗೇವಾಡಿ ಕರೆದೊಯ್ದು ಬಳಿಕ, ಖಾನಾಪುರ ಠಾಣೆಗೆ ಕರೆದೊಯ್ದರು. ಪೊಲೀಸರೇ ಒಳಗೆ ಫೋನ್ ಮೂಲಕ ಮಾತನಾಡುತ್ತಿದ್ದರು. ಪೊಲೀಸರೇ ಪಿಸುಪಿಸು ಮಾತನಾಡುತ್ತಿದ್ದರು. ಯಾವ ಕಾರಣಕ್ಕೆ ವಶಕ್ಕೆ ಪಡೆದುಕೊಂಡಿದ್ದೀರಾ ಎಂದು ಕೇಳಿದರೂ ಹೇಳಿಲ್ಲ. ಅಲ್ಲಿ ನಮ್ಮ ವಕೀಲರನ್ನು ಒಳಕ್ಕೆ ಬಿಟ್ಟೇ ಇಲ್ಲ. ನಿಯಮದ ಪ್ರಕಾರ ಕುಟುಂಬ ವರ್ಗಕ್ಕೆ ಮಾಹಿತಿ ಕೂಡ ನೀಡಿಲ್ಲ. ಪ್ರಕರಣದಲ್ಲಿ ಸರ್ಕಾರ ಪ್ರಮಾಣಿಕನೂ ಇಲ್ಲ, ಪಾರದರ್ಶಕವಾಗಿನೂ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಬಯ್ದ ಬಳಿಕ ವಕೀಲರನ್ನು ಠಾಣೆ ಒಳಕ್ಕೆ ಬಿಟ್ಟರು. ನಾನೊಂದು ದೂರು ಕೊಟ್ಟೆ. ಅದರ ಬಗ್ಗೆ ಎಫ್ಐಆರ್ ಬುಕ್ ಮಾಡೇ ಇಲ್ಲ. ಬಳಿಕ ಆರ್. ಅಶೋಕ್ ಸೇರಿ ನಮ್ಮ ವಕೀಲರು, ನಾಯಕರನ್ನು ಹೊರಗೆ ಕಳುಹಿಸಿದರು. ನಂತರ ನನ್ನನ್ನು ಹೊರಗೆ ಕರೆದುಕೊಂಡು ಹೋದರು. ಅಲ್ಲಿಂದ ನಂದಗಢಕ್ಕೆ ಕರೆದೊಯ್ದರು, ಬಳಿಕ ಕಿತ್ತೂರಿಗೆ ಕರೆದೊಯ್ದರು. ನೀರು ಕೇಳಿದರೂ ಕೊಟ್ಟಿಲ್ಲ. ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದಾಗ ಬೆಳಗಾವಿ ಎಂದು ಹೇಳಿದ್ದರು. ಬಳಿಕ ಧಾರವಾಡಕ್ಕೆ ಕರೆದೊಯ್ದಿದ್ದರು. ಇದೇ ವೇಳೆ ಪತ್ನಿಗೆ ನನ್ನ ಲೈವ್ ಲೊಕೇಷನ್ ಕಳುಹಿಸಿದೆ. ಅಲ್ಲಿಂದ ಆ ಬಳಿಕ ಸವದತ್ತಿ ಗದ್ದೆಗಳ ನಡುವೆ ಕರೆದೊಯ್ದರು. ಸುಮಾರು ಆರೆಂಟು ಪೊಲೀಸರು ಇದ್ದರು. ನಿಗೂಢವಾದ ಸ್ಥಳವಾಗಿತ್ತು. ಆಗ ಮಾಧ್ಯಮದವರು ಬಂದರು. ಅಲ್ಲಿ ನಾನು ಭಯದಿಂದ ನನ್ನನ್ನು ಏನೋ ಮಾಡಲು ಹೊರಟಿದ್ದಾರೆ ಎಂದು ಮಾಧ್ಯಮದವರಿಗೆ ತಿಳಿಸಿದೆ. ಕೊನೆಗೆ ಡಿವೈಎಸ್ಪಿ ಕಚೇರಿಗೆ ಕರೆತಂದರು. ಅಲ್ಲಿ ಎಂಎಲ್ಸಿ ಕೇಶವ ಪ್ರಸಾದ್ ಬಂದರು. ಅವರು ಪೊಲೀಸರಿಗೆ ಪ್ರಶ್ನಿಸಿದರು. ಬಳಿಕ ರಾಮದುರ್ಗಕ್ಕೆ ಕರೆದೊಯ್ದರು. ರಾತ್ರಿ 11.45ರಿಂದ ಮುಂಜಾನೆ 3 ಗಂಟೆವರೆಗೆ ನನಗೆ ಚಿಕಿತ್ಸೆ ಕೊಟ್ಟಿಲ್ಲ. ಎಲ್ಲೆಲ್ಲೋ ಕರೆದೊಯ್ದರು ಎಂದು ಸಿ ಟಿ ರವಿ ವಿವರಿಸಿದರು.
ಹಳ್ಳ, ತಗ್ಗು ಪ್ರದೇಶದ ಮೂಲಕ ಕರೆದೊಯ್ದು ಅಲ್ಲಿ ಸ್ಟೋನ್ ಕ್ರಷರ್ಗೆ ಕರೆದೊಯ್ದರು. ಅಲ್ಲಿ ನಾನು ಚೀರಾಡಲು ಶುರು ಮಾಡಿದೆ. ಆಗ ಮಾಧ್ಯಮದವರು ಬಂದರು. ನನ್ನಿಂದ ಫೋನ್ ಕಿತ್ತುಕೊಳ್ಳಲು ಯತ್ನಿಸಿದರು. ನನ್ನಿಂದ ಫೋನ್ ಕಿತ್ತುಕೊಂಡರೆ ನಾನು ಹಳೆ ರವಿ ಆಗಬೇಕಾಗುತ್ತೆ ಎಂದು ಅವರಿಗೆ ಜೋರಾಗಿ ಹೇಳಿದೆ. ಇತ್ತ ಫೋನ್ ಕಿತ್ತುಕೊಳ್ಳಲು ಆಗಲ್ವಾ ಎಂದು ಜೀಪ್ನಲ್ಲಿದ್ದ ಪೊಲೀಸರಿಗೆ ಮೇಲಾಧಿಕಾರಿಗಳು ಬೆದರಿಕೆ ಹಾಕುತ್ತಿದ್ದದು ಕೇಳಿಸುತ್ತಿತ್ತು. ಗದ್ದಲ ಹೆಚ್ಚಾಗುತ್ತಿದ್ದಂತೆ ಲೋಕಾಪುರದ ದಾರಿ ಹಿಡಿದು, ಮುಧೋಳಕ್ಕೆ ಕೊಂಡೊಯ್ದರು. ಬಳಿಕ ದಢೂತಿ ವ್ಯಕ್ತಿಯೊಬ್ಬ ಬಂದು ನನ್ನಿಂದ ಫೋನ್ ಕಿತ್ತುಕೊಳ್ಳಲು ಯತ್ನಿಸಿದ. ಆಗ ನಾನು ತಲೆ ಚಚ್ಚಿ, ಡೋರ್ ಒದ್ದೆ. ಬಳಿಕ ಗದ್ದೆಗೆ ಕರೆದೊಯ್ದು ದಯವಿಟ್ಟು ಫೋನ್ ಕೊಡಿ ಎಂದು ಮನವಿ ಮಾಡಿದರು. ಆದರೆ, ನಾನು ನಿರಾಕರಿಸಿದೆ. ಫೋನ್ ಕಿತ್ತರೆ ಹುಷಾರ್ ಅಂದೆ.
ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಬಂದು, ನೀವೇನು ಹೆದರ ಬೇಡಿ, ಫೋನ್ ಕೊಡಿ ಅಂದರು. ಆದರೆ, ನಾನು ನಿರಾಕರಿಸಿದೆ. ಆಗ ಆ ದಢೂತಿ ವ್ಯಕ್ತಿ ನನ್ನಿಂದ ಫೋನ್ ಕೀಳಲು ಯತ್ನಿಸಿದ. ನಾನು ಪ್ರತಿರೋಧ ತೋರಿದೆ. ಮುಂದೆ ಅಂಕಲಿಗಿ ಠಾಣೆಗೆ ಕರೆದೊಯ್ದರು. ಅಲ್ಲಿ ತಿಂಡಿ ತಿನಿಸಲು ಮುಂದಾದರು. ಬಳಿಕ ನೇರವಾಗಿ ಆಸ್ಪತ್ರೆಗೆ ಕತೆದುಕೊಂಡು ಹೋದರು. ಅಲ್ಲಿ ಬಿಪಿ ಹೆಚ್ಚು ಇತ್ತು. ಸ್ಕಾನಿಂಗ್ ಮಾಡಿಸಲು ಹೇಳಿದ್ದರು ಎಂದು ನಡೆದ ಘಟನೆ ವಿವಿರಿಸಿದರು.
ಏಕೆ ಹಲ್ಲೆ ಮಾಡಿದವರನ್ನು ಬಿಟ್ಟು ಕಳಿಸಿದ್ದೀರಿ?. ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಅಂತ ಬಿಟ್ರಾ?. ಪಾಕಿಸ್ತಾನ ಜಿಂದಾಬಾದ್ ಪ್ರಕರಣ ಸಂಬಂಧ ಎಫ್ಎಸ್ಎಲ್ ರಿಪೊರ್ಟ್ ಬರಲಿ ಎಂದಿದ್ದೀರಿ. ಈಗ ಯಾವ ಎಫ್ಎಸ್ಎಲ್ ವರದಿ ಬರದೆಯೂ ಹೇಗೆ ಬಂಧನ ಮಾಡಿದ್ದೀರಿ? ಇದರ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಅದು ಲಕ್ಷ್ಮಿ ಹೆಬ್ಬಾಳ್ಕರ್ ಏರಿಯಾ, ಜೀವಂತ ಬಿಟ್ಟಿದ್ದೇ ದೊಡ್ಡದು ಅಂತ ಡಿಸಿಎಂ ಹೇಳಿಕೆ ಕೊಟ್ಟಿದ್ದಾರೆ. ಬೆಳಗಾವಿ ಅಂದರೆ ಬನಾನ ರಿಪಬ್ಲಿಕಾ, ಕನಕಪುರ ಅಂದರೆ ಬನಾನ ರಿಪಬ್ಲಿಕಾ?. ಅವರ ಹೇಳಿಕೆ ಭಯ ಹುಟ್ಟಿಸುವ ರೀತಿ ಇದೆ. ಅವರ ಹೇಳಿಕೆ ಡಿಸಿಎಂ ಘನತೆಗೆ ತಕ್ಕುದಾದದ್ದು ಅಲ್ಲ. ಗೃಹ ಸಚಿವರು ಕೆಟ್ಟವರು ಅಂತ ಹೇಳಲ್ಲ. ಆದರೆ, ಗೃಹ ಇಲಾಖೆ ಅವರ ನಿಯಂತ್ರಣದಲ್ಲಿ ಇದಿಯಾ?. ಅವರು ಆ ಬಗ್ಗೆ ನನಗೆ ಮಾಹಿತಿನೇ ಇಲ್ಲ ಎಂದು ನನ್ನ ಆಪ್ತರಲ್ಲಿ ಹೇಳಿದ್ದಾರೆ. ಇದೆಲ್ಲ ರವಿಯ ಜನಪ್ರಿಯತೆ ಹೆಚ್ಚು ಮಾಡಲು ನಾವೇ ಅವಕಾಶ ಕೊಟ್ಟಂಗೆ ಆಯ್ತು ಎಂದು ಅವರೇ ಹೇಳಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ, ಆಗ ನಿಮ್ಮ ಕಾರ್ಯಕ್ಷಮತೆ ಬಗ್ಗೆ ನಂಬಿಕೆ ಬರುತ್ತೆ ಎಂದು ಆಗ್ರಹಿಸಿದರು.
ನಾನು ಕೆಟ್ಟ ಹೃದಯದವನಲ್ಲ. ಜನರ ಕಷ್ಟಕ್ಕೆ, ದೇಶಕ್ಕಾಗಿ ಸ್ಪಂದಿಸುವ ವೇಳೆ ಕೆಟ್ಟದಾಗಿ ಮಾತನಾಡುತ್ತೇನೆ. ಡಿಕೆಶಿ ಚಿಕ್ಕಮಗಳೂರು ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಟ್ರಾಕ್ ರೆಕಾರ್ಡ್ ಕನಕಪುರದವರಿಗೆ ಗೊತ್ತಿದೆ. ಕಾನೂನು ಬದ್ಧವಾಗಿ ಏನು ಬೇಕಾದರು ಎದುರಿಸುತ್ತೇನೆ. ಡಿಸಿಎಂ ಅವರೇ ಮಾತನಾಡಿರುವ ರೀತಿ ನೋಡಿ, ಚನ್ನರಾಜ್ ಹಟ್ಟಿಹೊಳಿ ಮಾತನಾಡಿರುವ ರೀತಿ ನೋಡಿ. ಅವರ ಆಡಿಯೋ, ವಿಡಿಯೋ ನೋಡಿ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ. ಆದರೆ, ಇದೊಂದು ಷಡ್ಯಂತ್ರದ ಭಾಗ. ಕಾಲವೇ ಉತ್ತರ ಕೊಡುತ್ತದೆ. ಅಧಿಕಾರದ ರಾಜಕಾರಣಕ್ಕೆ 25 ವರ್ಷ. ನಾನು ದ್ವೇಷದ ರಾಜಕಾರಣ ಎಂದಾದರು ಮಾಡಿದ್ದೇನಾ ಕೇಳಿ ನೋಡಿ ಎಂದರು.
ವಾಕಿ ಮೂಲಕ ಡೈರೆಕ್ಷನ್ ಕಡಿಮೆ ಇತ್ತು. ಪೊಲೀಸರಿಗೆ ಖಾಸಗಿ ಫೋನ್ ಹಾಗೂ ಅಧಿಕೃತ ಫೋನ್ಗೆ ಕರೆ ಬರುತ್ತಿದ್ದವು. ಪೊಲೀಸರು ದೂರವಾಣಿ ಕರೆಯಲ್ಲಿ ಮಾತನಾಡುವ ಭಾಷೆ ಏಕವಚನದಲ್ಲಿ ಇರಲಿಲ್ಲ. ಸರ್ ಎಂಬ ಪದ ಬಳಕೆ ಮಾಡುತ್ತಿದ್ದರು. ಹಾಗಾಗಿ ಅದು ಮೇಲಾಧಿಕಾರಿಗಳು, ಮಂತ್ರಿಗಳು ಇರಬಹುದು. ಕಾಲ್ ರೆಕಾರ್ಡ್ ಚೆಕ್ ಮಾಡಲಿ. ಯಾರು ಮಾತನಾಡಿದ್ದಾರೆ ಎಂಬುದು ಗೊತ್ತಾಗಲಿ. ನನ್ನನ್ನು ಕ್ರಿಮಿನಲ್ ತರ ಏಕೆ ನೋಡಿದಿರಿ ಎಂದು ಸಿ ಟಿ ರವಿ ಪ್ರಶ್ನಿಸಿದರು.
ಸಿ.ಟಿ.ರವಿಗೆ ಆಭೂತಪೂರ್ವ ಸ್ವಾಗತ: ಸಿ.ಟಿ. ರವಿ ಮಲ್ಲೇಶ್ವರ ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅಭೂತಪೂರ್ವವಾಗಿ ಸ್ವಾಗತ ಮಾಡಿದರು. ಸಿ.ಟಿ. ರವಿ ಮೇಲೆ ಹೂಮಳೆ ಸುರಿಸಿ ಅದ್ಧೂರಿಯಾಗಿ ಆಹ್ವಾನಿಸಿದರು. ಕಾರ್ಯಕರ್ತರು ಸಿ.ಟಿ.ರವಿ ಪರ ಜಯ ಘೋಷಣೆ ಹಾಕಿದರು.
ಇದನ್ನೂ ಓದಿ: ಪೊಲೀಸರು ಕಾನೂನು ಪ್ರಕಾರ ಸಿ.ಟಿ.ರವಿ ಬಂಧನ ಮಾಡಲಾಗಿದೆ ಅಂದಿದ್ದಾರೆ: ಜಿ.ಪರಮೇಶ್ವರ್ - HOME MINISTER G PARAMESHWARA