ಕುವೈತ್: ತಮ್ಮ ವಿಶೇಷ ಆಹ್ವಾನದ ಮೇರೆಗೆ ಕುವೈತ್‌ಗೆ ಎರಡು ದಿನಗಳ ಭೇಟಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅರಬ್ ದೇಶದ ದೊರೆ ಶೇಖ್ ಮೆಶಾಲ್ ಅಲ್ ಅಹ್ಮದ್ ಅಲ್ ಜಾಬರ್ ಅಲ್ ಸಬಾಹ್ ಅದ್ಧೂರಿಯಾಗಿ ಸ್ವಾಗತಿಸಿದರು.
ಕುವೈತ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಭಾರತದ ಪ್ರಧಾನಿಯನ್ನು ಉಪ ಪ್ರಧಾನ ಮಂತ್ರಿ, ರಕ್ಷಣಾ ಮತ್ತು ಆಂತರಿಕ ಸಚಿವ ಶೇಖ್ ಫಹಾದ್ ಯೂಸುಫ್ ಸೌದ್ ಅಲ್-ಸಬಾಹ್ ಆತ್ಮೀಯವಾಗಿ ಬರಮಾಡಿಕೊಂಡರು.
A new chapter in the making!
— Randhir Jaiswal (@MEAIndia) December 21, 2024
PM @narendramodi arrives in Kuwait to a ceremonial welcome.
Warmly received by H.E Sheikh Fahad Yousef Saud Al-Sabah First Deputy PM, Minister of Defence & Interior of 🇰🇼, H.E. Abdullah Ali Al-Yahya, FM of 🇰🇼 & several other Ministers & dignitaries… pic.twitter.com/iOQSOoLXYO
ಮೋದಿಗೆ ಆತ್ಮೀಯ ಸ್ವಾಗತ: ಕುವೈತ್‌ನಲ್ಲಿ ತಮಗೆ ಸಿಕ್ಕ ಸ್ವಾಗತವನ್ನು ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಚಿತ್ರಗಳ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. 'ಕುವೈತ್‌ಗೆ ಬಂದಿಳಿದಾಗ ಆತ್ಮೀಯ ಸ್ವಾಗತ ಸಿಕ್ಕಿತು. 43 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಒಬ್ಬರ ಮೊದಲ ಭೇಟಿಯಾಗಿದೆ. ಇದು ನಿಸ್ಸಂದೇಹವಾಗಿ ವಿವಿಧ ಕ್ಷೇತ್ರಗಳಲ್ಲಿ ಭಾರತ-ಕುವೈತ್ ಸ್ನೇಹವನ್ನು ಬಲಪಡಿಸುತ್ತದೆ. ಇಂದು ಮತ್ತು ನಾಳೆಯ ಕಾರ್ಯಕ್ರಮಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ಖಾತೆಯಲ್ಲೂ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, "ಹೊಸ ಅಧ್ಯಾಯ ಆರಂಭ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶೇಖ್ ಫಹಾದ್ ಯೂಸುಫ್ ಸೌದ್ ಅಲ್ ಸಬಾಹ್ ಅವರು ವಿಧ್ಯುಕ್ತ ಸ್ವಾಗತ ಕೋರಿದರು. ವಿವಿಧ ಗಣ್ಯರು ಇದ್ದರು" ಎಂದು ತಿಳಿಸಿದ್ದಾರೆ.
ಪ್ರಯಾಣಕ್ಕೂ ಮೊದಲು ಪೋಸ್ಟ್ ಹಂಚಿಕೊಂಡಿದ್ದ ಪ್ರಧಾನಿ, ಎರಡು ದಿನಗಳ ಭೇಟಿಗಾಗಿ ಗಲ್ಫ್ ರಾಷ್ಟ್ರಕ್ಕೆ ಶನಿವಾರ ಪ್ರಯಾಣಿಸುತ್ತಿದ್ದೇನೆ. ಅಲ್ಲಿನ ಭಾರತೀಯ ವಲಸಿಗರೊಂದಿಗೆ ಭೇಟಿ, ಮಾತುಕತೆ ನಡೆಯಲಿದೆ. ಕುವೈತ್ ದೊರೆಯ ಜೊತೆ ಉಭಯ ರಾಷ್ಟ್ರಗಳ ಹಿತಾಸಕ್ತಿಯ ಕುರಿತು ಮಾತುಕತೆ ನಡೆಸಲಿದ್ದೇನೆ. ವಿವಿಧ ವಲಯಗಳಲ್ಲಿ ಭಾರತ-ಕುವೈತ್ ಸ್ನೇಹವನ್ನು ಬಲಪಡಿಸಲಾಗುವುದು ಎಂದು ತಿಳಿಸಿದ್ದರು.
ಭಾರತೀಯ ಕಾರ್ಮಿಕರ ಭೇಟಿ: ಪ್ರವಾಸದ ಆರಂಭದಲ್ಲಿ ಕುವೈತ್ನ ಕಾರ್ಮಿಕ ಶಿಬಿರದಲ್ಲಿ ಭಾರತೀಯ ಉದ್ಯೋಗಿಗಳನ್ನು ಪ್ರಧಾನಿ ಭೇಟಿ ಮಾಡಲಿದ್ದಾರೆ. ಈ ವೇಳೆ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಭಾರತದ ಸಂಬಂಧ ವೃದ್ಧಿಯಲ್ಲಿ ವಿದೇಶಿ ನಾಗರಿಕರ ಕೊಡುಗೆಯನ್ನು ಅವರು ತಿಳಿಸಲಿದ್ದಾರೆ.
ಪ್ರಧಾನಿ ಪ್ರವಾಸ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯ, ಈ ಭೇಟಿಯು ಎರಡು ದೇಶಗಳ ನಡುವೆ ಮತ್ತಷ್ಟು ಸಂಬಂಧ ವೃದ್ದಿಗೆ ಅವಕಾಶ ನೀಡುತ್ತದೆ ಎಂದು ತಿಳಿಸಿದೆ. ಈ ಪ್ರವಾಸದಲ್ಲಿ ಪ್ರಧಾನಿ, ವ್ಯಾಪಾರ, ಹೂಡಿಕೆ, ಇಂಧನ ಸಹಕಾರ ಸೇರಿದಂತೆ ಪ್ರಮುಖ ವಿಚಾರ ಕುರಿತು ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಎರಡು ದಿನಗಳ ಕಾಲ ಮೋದಿ ಕುವೈತ್ ಪ್ರವಾಸ: ದ್ವಿಪಕ್ಷೀಯ ಸಂಬಂಧ ವೃದ್ಧಿ ಸಂಬಂಧ ಮಾತುಕತೆ