ತಿರುವನಂತಪುರಂ: ರಾಜ್ಯಗಳಿಗೆ ನೀಡಲಾಗುವ ತೆರಿಗೆಗಳ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದು, ಕೇಂದ್ರ ತೆರಿಗೆಗಳ ನಿವ್ವಳ ಆದಾಯದಲ್ಲಿ ರಾಜ್ಯಗಳ ಪಾಲನ್ನು ಶೇಕಡಾ 50 ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
16 ನೇ ಹಣಕಾಸು ಆಯೋಗದ ಶಿಫಾರಸುಗಳಿಗೆ ಮುಂಚಿತವಾಗಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಪ್ರತಿಪಕ್ಷ ಆಡಳಿತದ ರಾಜ್ಯಗಳ ಹಣಕಾಸು ಸಚಿವರೊಂದಿಗೆ ಗುರುವಾರ ನಡೆದ ಉನ್ನತ ಮಟ್ಟದ ಸಮಾವೇಶದಲ್ಲಿ ಪಿಣರಾಯಿ ವಿಜಯನ್ ಈ ಬೇಡಿಕೆಯನ್ನು ಮಂಡಿಸಿದ್ದಾರೆ.
ಸಭೆಯಲ್ಲಿ ತೆಲಂಗಾಣ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಭಟ್ಟಿ ವಿಕ್ರಮಾರ್ಕ ಮಲ್ಲು, ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಮತ್ತು ತಮಿಳುನಾಡು ಹಣಕಾಸು ಸಚಿವ ತಂಗಂ ತೆನ್ನರಸು ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
"ಕೇಂದ್ರ ಮತ್ತು ರಾಜ್ಯಗಳ ತೆರಿಗೆ ವಿಧಿಸುವ ಅಧಿಕಾರಗಳು ಮತ್ತು ವೆಚ್ಚದ ಬಾಧ್ಯತೆಗಳ ನಡುವಿನ ದೊಡ್ಡ ಮಟ್ಟದ ಹಣಕಾಸು ಅಸಮತೋಲನವಿರುವುದನ್ನು ಪರಿಗಣಿಸಿ ರಾಜ್ಯಗಳಿಗೆ ವಿತರಿಸಬೇಕಾದ ತೆರಿಗೆಗಳ ಹಿಂದಿನ ಪಾಲನ್ನು ನಿವ್ವಳ ಆದಾಯದ ಶೇಕಡಾ 50 ಕ್ಕೆ ಹೆಚ್ಚಿಸಬೇಕಾಗಿದೆ ಎಂದು ಕೇರಳವು 15 ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ ಜ್ಞಾಪಕ ಪತ್ರದಲ್ಲಿ ಒತ್ತಾಯಿಸಿದೆ" ಎಂದು ಸಿಎಂ ವಿಜಯನ್ ಹೇಳಿದರು. ಈ ವಿಷಯದಲ್ಲಿ ವಿವಿಧ ರಾಜ್ಯಗಳು ಒಗ್ಗಟ್ಟಾಗಿ ಪ್ರಯತ್ನಿಸಿದರೆ 16 ನೇ ಹಣಕಾಸು ಆಯೋಗದ ಮನವೊಲಿಸಬಹುದು ಎಂದು ಅವರು ತಿಳಿಸಿದರು.