ನವದೆಹಲಿ: 2024-25ರ ಹಿಂಗಾರು ಮಾರುಕಟ್ಟೆ ಋತುವಿನಲ್ಲಿ 300 ರಿಂದ 320 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹಣೆ ಮಾಡಿಟ್ಟುಕೊಳ್ಳುವ ಅಂದಾಜುಗಳನ್ನು ಕೇಂದ್ರವು ನಿಗದಿಪಡಿಸಿದೆ ಎಂದು ಆಹಾರ ಸಚಿವಾಲಯ ಗುರುವಾರ ತಿಳಿಸಿದೆ. ರಾಜ್ಯಗಳೊಂದಿಗೆ ಸಮಾಲೋಚಿಸಿದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಹಾಗೆಯೇ, 2023-24 ರ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ (ರಾಬಿ ಬೆಳೆ) ಭತ್ತದ ಸಂಗ್ರಹಣೆಯ ಅಂದಾಜುಗಳನ್ನು 90 ರಿಂದ 100 ಲಕ್ಷ ಮೆಟ್ರಿಕ್ ಟನ್ ವ್ಯಾಪ್ತಿಯಲ್ಲಿ ನಿಗದಿಪಡಿಸಲಾಗಿದೆ.
2023-24 ರ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ (ರಾಬಿ ಬೆಳೆ) ರಾಜ್ಯಗಳು ಸುಮಾರು 6 ಲಕ್ಷ ಮೆಟ್ರಿಕ್ ಟನ್ ಒರಟು ಧಾನ್ಯಗಳು / ರಾಗಿಗಳನ್ನು ಸಂಗ್ರಹಿಸುವ ಅಂದಾಜು ಮಾಡಿವೆ. ಬೆಳೆಗಳ ವೈವಿಧ್ಯೀಕರಣ ಮತ್ತು ಆಹಾರ ಪದ್ಧತಿಯಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸಲು ಸಿರಿಧಾನ್ಯಗಳ ಸಂಗ್ರಹಣೆಯತ್ತ ಗಮನ ಹರಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ.
ರಬಿ ಮತ್ತು ಖಾರಿಫ್ ಬೆಳೆಗಳ ಖರೀದಿ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಕೇಂದ್ರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ರಾಜ್ಯ ಆಹಾರ ಕಾರ್ಯದರ್ಶಿಗಳೊಂದಿಗೆ ಇಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಅಂದಾಜುಗಳನ್ನು ನಿರ್ಧರಿಸಲಾಗಿದೆ. ಹವಾಮಾನ ಪರಿಸ್ಥಿತಿಗಳ ಮುನ್ಸೂಚನೆ, ಉತ್ಪಾದನಾ ಅಂದಾಜುಗಳು ಮತ್ತು ರಾಜ್ಯಗಳ ಸಿದ್ಧತೆಯಂತಹ ಸಂಗ್ರಹಣೆಯ ಮೇಲೆ ಪರಿಣಾಮ ಬೀರುವ ವಿವಿಧ ಅಂಶಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.