ಮೈಸೂರು: ಅರಮನೆಯ ತ್ರಿನೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಶಿವರಾತ್ರಿಯ ಪೂಜಾ ಕೈಂಕರ್ಯಗಳು ಕಳೆಗಟ್ಟಿವೆ. ದೇವಾಲಯಕ್ಕೆ ರಾಜವಂಶಸ್ಥ ಯದುವೀರ್ ಕುಟುಂಬದವರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ನಾಡಿನ ಜನರಿಗೆ ಮಹಾ ಶಿವರಾತ್ರಿಯ ಶುಭಾಶಯ ಕೋರಿದ ಯದುವೀರ್ ಕುಟುಂಬ, ತಮ್ಮ 2ನೇ ಮಗನ ಹೆಸರನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳಿದರು.
ವಿಶೇಷವಾಗಿ ತ್ರಿನೇಶ್ವರನಿಗೆ 11 ಕೆ.ಜಿ. ತೂಕದ ಚಿನ್ನದ ಮುಖವಾಡ ಹಾಕಲಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ಬೆಳಗ್ಗೆಯಿಂದಲೇ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಇಂದಿನ ಬೆಳಗ್ಗೆಯಿಂದ ನಾಳೆ ಬೆಳಗ್ಗೆಯವರೆಗೆ ಶಿವರಾತ್ರಿಯ ಪೂಜೆಗಳು ನಡೆಯಲಿವೆ.

ಸಂಸದ, ರಾಜವಶಂಸ್ಥ ಯದುವೀರ್ ಒಡೆಯರ್ ಇಂದು ಬೆಳಗ್ಗೆ ಹೆಂಡತಿ ತ್ರಿಷಿಕಾ ಒಡೆಯರ್, ಮೊದಲ ಮಗ ಆದ್ಯವೀರ್, ಎರಡನೇ ಮಗ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಸಮೇತ ತ್ರಿನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಯದುವೀರ್, " ಇಂದು ತ್ರಿನೇಶ್ವರ ಸ್ವಾಮಿಯ ದರ್ಶನಕ್ಕೆ ಬಂದಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಲಿ. ಚಾಮುಂಡೇಶ್ವರಿ ತಾಯಿಯ ಆರ್ಶೀವಾದದಿಂದ ಎರಡನೇ ಮಗುವಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಿದ್ದೇವೆ. ನಿಮ್ಮೆಲ್ಲರ ಪ್ರೀತಿ ಹಾರೈಕೆ ಇರಲಿ" ಎಂದರು.
ಇದನ್ನೂ ಓದಿ: ಮೈಸೂರು: ತ್ರಿನೇಶ್ವರ ಸ್ವಾಮಿಗೆ 11 ಕೆ.ಜಿ. ತೂಕದ ಚಿನ್ನದ ಮುಖವಾಡ ಧಾರಣೆ: ಇದರ ಇತಿಹಾಸ ಹೀಗಿದೆ