ಬೆಂಗಳೂರು : ವಿಧಾನಸಭೆ ಸಚಿವಾಲಯದ ವತಿಯಿಂದ ಪ್ರಪ್ರಥಮ ಬಾರಿಗೆ ಫೆಬ್ರವರಿ 27 ರಿಂದ ಮಾರ್ಚ್ 3ರ ವರೆಗೆ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ಆಯೋಜಿಸಲಾಗಿದೆ.
ವಿಧಾನಸೌಧದ ಆವರಣದಲ್ಲಿ ಆಯೋಜಿಸಿರುವ ಪುಸ್ತಕ ಮೇಳದ ಸಿದ್ಧತಾ ಕಾರ್ಯವನ್ನು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರು ಇಂದು ಪರಿಶೀಲಿಸಿದರು.

ಈ ಸಂದರ್ಭದಲ್ಲಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಾಳೆ (ಫೆ.27) ಸಂಜೆ 5 ಗಂಟೆಗೆ ಪುಸ್ತಕ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಚಿವರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಫೆ.28 ಮತ್ತು ಮಾ.2 ರಂದು ಸಂಜೆ 5 ಗಂಟೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ.2ರಂದು ಖ್ಯಾತ ಗಾಯಕರಾದ ಸಾಧುಕೋಕಿಲ ಅವರಿಂದ ಸಂಗೀತ ರಸಸಂಜೆ ಏರ್ಪಡಿಸಲಾಗಿದೆ.

ಫೆ.28ರಿಂದ ಮಾ.2ರ ವರೆಗೆ ವಿಧಾನಸೌಧದ ಆವರಣದಲ್ಲಿ ಪ್ರತಿದಿನ ಎರಡು ವೇದಿಕೆಗಳಲ್ಲಿ ವಿವಿಧ ವಿಷಯಗಳ ಸಂವಾದ ಕಾರ್ಯಕ್ರಮಗಳು, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿವೆ. ಈ ಸಂವಾದ ಕಾರ್ಯಕ್ರಮಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಂಗಳೂರು ವಿವಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಅಲ್ಲದೆ ವಿವಿಧ ಲೇಖಕರ ಪುಸ್ತಕಗಳ ಬಿಡುಗಡೆಗೂ ಅವಕಾಶ ಮಾಡಿಕೊಡಲಾಗುತ್ತದೆ. ಫೆ.28 ರಿಂದ ಮಾ.2ರ ವರೆಗೆ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರಸಕ್ತ ಸಾಲಿನ ಅನುದಾನದಲ್ಲಿ 2 ಲಕ್ಷ ರೂ.ಗಳ ಮಿತಿಯೊಳಗೆ ಶಾಸಕರು ಪುಸ್ತಕಗಳನ್ನು ಖರೀದಿಸಿ ಆಯಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. 150 ಮಳಿಗೆ ತೆರೆಯಲು ಮಾತ್ರ ಅವಕಾಶವಿದ್ದು, ವಿವಿಧ ಅಕಾಡೆಮಿಗಳ ಮಳಿಗೆಗಳು, ಖಾಸಗಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ವಿಧಾನಸೌಧ ಆವರಣದಲ್ಲಿ ಮೂರು ದಿನ ಪುಸ್ತಕ, ಆಹಾರ ಮೇಳ: ಸ್ಪೀಕರ್ ಯು.ಟಿ.ಖಾದರ್ - BOOK AND FOOD FAIR