ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಚುನಾವಣೆಯ ನಂತರ ಮೈತ್ರಿಕೂಟದ ಪಾಲುದಾರ ಪಕ್ಷಗಳೇ ನಿರ್ಧರಿಸಲಿವೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಭಾನುವಾರ ಬಿಜೆಪಿಯ ಸಂಕಲ್ಪ ಪತ್ರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ಮುಂಬೈನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೈತ್ರಿಕೂಟದ ಎಲ್ಲಾ ಮೂರು ಪಾಲುದಾರ ಪಕ್ಷಗಳಾದ ಬಿಜೆಪಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ ಮತ್ತು ಚುನಾವಣೆಯ ನಂತರ, ನೀಡಿದ ಭರವಸೆಗಳ ಈಡೇರಿಕೆಗೆ ಆದ್ಯತೆ ನೀಡಲು ಮೂರೂ ಪಕ್ಷಗಳ ಸಚಿವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
"ಪ್ರಸ್ತುತ ಸಂದರ್ಭದಲ್ಲಿ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದಾರೆ. ಚುನಾವಣೆಯ ನಂತರ, ಎಲ್ಲಾ ಮೂರು ಮೈತ್ರಿ ಪಾಲುದಾರರು ಚರ್ಚಿಸಿ ಮುಂದಿನ ಸಿಎಂ ಯಾರಾಗಬೇಕೆಂಬುದನ್ನು ನಿರ್ಧರಿಸುತ್ತಾರೆ" ಎಂದು ಶಾ ನುಡಿದರು.
ಉದ್ಧವ್ ಠಾಕ್ರೆ ಅವರು ಏಕನಾಥ್ ಶಿಂಧೆಗಿಂತ ತಮ್ಮ ಮಗನಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಮತ್ತು ಶರದ್ ಪವಾರ್ ಅಜಿತ್ ಪವಾರ್ ಅವರಿಗಿಂತ ತಮ್ಮ ಮಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಶಿವಸೇನೆ ಮತ್ತು ಎನ್ಸಿಪಿ ವಿಭಜನೆಗೊಂಡವು ಎಂದು ಶಾ ಕುಟುಕಿದರು.