'ಕಣ್ಣಪ್ಪ', ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರು ಈ ಪೌರಾಣಿಕ ಚಿತ್ರದಲ್ಲಿ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಚಿತ್ರದಿಂದ ತಮ್ಮ ಮೊದಲ ನೋಟವನ್ನು ಅನಾವರಣಗೊಳಿಸಿದ್ದಾರೆ.
ದಕ್ಷಿಣದ ಖ್ಯಾತ ನಟ ವಿಷ್ಣು ಮಂಚು ಸಾರಥ್ಯದ ಸಿನಿಮಾವಿದು. ಏಪ್ರಿಲ್ 25ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್, ಮೋಹನ್ ಬಾಬು, ಮಧು ಮತ್ತು ಮೋಹನ್ ಲಾಲ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿರುವ ಬಾಲಿವುಡ್ ಖಿಲಾಡಿ ಖ್ಯಾತಿಯ ಅಕ್ಷಯ್ ಕುಮಾರ್, ಕಣ್ಣಪ್ಪ ಚಿತ್ರದ ಮಹಾದೇವನ ಪಾತ್ರಕ್ಕೆ ಹೆಜ್ಜೆ ಹಾಕುತ್ತಿದ್ದೇನೆ. ಈ ಎಪಿಕ್ ಸ್ಟೋರಿಯ ಪಾತ್ರಕ್ಕೆ ಜೀವ ತುಂಬುತ್ತಿರೋದು ಗೌರವದ ಕ್ಷಣ. ಈ ದೈವಿಕ ಪ್ರಯಾಣದಲ್ಲಿ ಆ ಶಿವ ನಮಗೆ ಮಾರ್ಗದರ್ಶನ ನೀಡಲಿ. ಓಂ ನಮಃ ಶಿವಾಯ ಎಂದು ಬರೆದುಕೊಂಡಿದ್ದಾರೆ. ಒ ಮೈ ಗಾಡ್ ಫ್ರಾಂಚೈಸಿಯಲ್ಲಿನ ಶ್ರೀಕೃಷ್ಣನ ಪಾತ್ರದ ನಂತರ, ಇದು ಅಕ್ಷಯ್ ಕುಮಾರ್ ಅವರ ಎರಡನೇ ದೈವಿಕ ಪಾತ್ರವಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಉಗ್ರಂ ಮಂಜು - ರಜತ್ ಕಿಶನ್ ಬಿಗ್ ಫೈಟ್; ಅವಾಚ್ಯ ಪದ ಬಳಕೆ
ಫಸ್ಟ್ ಲುಕ್ ಪೋಸ್ಟರ್‌ನಲ್ಲಿ, ಅಕ್ಷಯ್ ಕುಮಾರ್ ಮಹಾದೇವನ ಪಾತ್ರವನ್ನು ಸಾಕಾರಗೊಳಿಸಿದ್ದಾರೆ. ಶಿಖರದ ಮೇಲೆ ಮಹಾದೇವನ ಭಂಗಿಯಲ್ಲಿ ಭವ್ಯ ನೋಟ ಬೀರಿದ್ದಾರೆ. ತ್ರಿಶೂಲ ಮತ್ತು ಡಮರುಗ ಹಿಡಿದು ದೈವಿಕ ಶಕ್ತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಪೋಸ್ಟರ್‌ನಲ್ಲಿ, "ಮೂರು ಲೋಕಗಳನ್ನು ಆಳುವ ಪರಮಾತ್ಮನು ಪರಿಶುದ್ಧ ಭಕ್ತಿಗೆ ಶರಣಾದ" ಎಂಬ ಟ್ಯಾಗ್‌ಲೈನ್ ಇದೆ.
ಇದನ್ನೂ ಓದಿ: 'ಹೋಸ್ಟ್ ಆಗಿ ಕೊನೆಯ ಎಪಿಸೋಡ್': ಬಿಗ್ ಬಾಸ್ಗೆ ಮರೆಯಲಾಗದ ಪಯಣವೆಂದ ಸುದೀಪ್
ಮುಖೇಶ್ ಕುಮಾರ್ ಸಿಂಗ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ, ಶಿವನ ಪರಮ ಭಕ್ತ ಕಣ್ಣಪ್ಪನ ಪೌರಾಣಿಕ ಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನವಾಗಿದೆ. ಭಕ್ತ, ಶಿವನಿಗೆ ತಮ್ಮ ಕಣ್ಣುಗಳನ್ನು ದಾನ ಮಾಡಿ ತನ್ನ ಅಸಾಧಾರಣ ತ್ಯಾಗದಿಂದ ಪುರಾಣ ಪ್ರಸಿದ್ಧಿಯಾಗಿದ್ದಾರೆ. ಈ ಕಥೆಯು ಆಂಧ್ರಪ್ರದೇಶದ ಶ್ರೀಕಾಳಹಸ್ತೀಶ್ವರ ದೇವಸ್ಥಾನದೊಂದಿಗೆ ಸಂಬಂಧ ಹೊಂದಿದೆ. ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಣವಾಗಿದ್ದು, ಪ್ರೇಕ್ಷಕರಿಗೆ ಅದ್ಭುತ ಸಿನಿಮೀಯ ಅನುಭವ ಪೂರೈಸುವ ಭರವಸೆ ಇದೆ. ಸಿನಿಮಾ ಏಪ್ರಿಲ್ 25ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಮೋಹನ್ ಬಾಬು ನಿರ್ಮಾಣದ ಈ ಚಿತ್ರ ಸದ್ಯ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಫಸ್ಟ್ ಲುಕ್ ಪೋಸ್ಟರ್ನಿಂದ ಸಖತ್ ಸದ್ದು ಮಾಡುತ್ತಿದೆ.