ಚಿಕ್ಕೋಡಿ (ಬೆಳಗಾವಿ): "ಕೆಲವು ಸಚಿವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಪಕ್ಷದ ವರಿಷ್ಠರಿಗೆ ದೂರು ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ನಾವು ಅವರ ವಿಚಾರದಲ್ಲಿ ಯಾವುದೇ ದೂರು ಕೊಟ್ಟಿಲ್ಲ, ಇದರ ಬಗ್ಗೆ ದೂರು ಕೊಟ್ಟವರನ್ನೇ ಕೇಳಬೇಕು. ಸುರ್ಜೇವಾಲ ಅವರೊಂದಿಗೆ ನಮ್ಮ ಸಂಬಂಧ ಚೆನ್ನಾಗಿದೆ" ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಉದ್ಯಾನಕಾಶಿಯಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎಸ್. ಎನ್. ಬೋಸರಾಜು ಅವರೊಂದಿಗೆ 15 ಕೋಟಿ ರೂ. ವೆಚ್ಚದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಮಿನಿ ಕಾರ್ಯಾಲಯ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರಿಗೆ ಗೌರವ ಕೊಡದವರು ಅವರ ಹೆಸರು ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕಿಯಿಸಿ, "ಇತ್ತೀಚಿಗೆ ಕೇಂದ್ರ ಸಚಿವ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡಿದ್ದರು. ಹೀಗಾಗಿ ಯತ್ನಾಳ್ಗೆ ಈ ಬಗ್ಗೆ ಮತನಾಡುವ ನೈತಿಕತೆ ಇಲ್ಲ" ಎಂದರು.
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ನಿಮ್ಮ ನಡುವೆ ಶೀತಲಸಮರ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, "ಮುಸುಕಿನ ಗುದ್ದಾಟ, ಕೋಲ್ಡ್ ವಾರ್ ಎಲ್ಲಿ ನಡೆಯುತ್ತಿದೆ, ನನಗೆ ಗೊತ್ತಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಬೆಳಗಾವಿಗೆ ವಿಶೇಷ ಕೊಡುಗೆ ಘೋಷಣೆ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಳಗಾವಿಯಲ್ಲಿ ಡರ್ಟಿ ಪಾಲಿಟಿಕ್ಸ್ ಬಗ್ಗೆ ಮಾತನಾಡಲ್ಲ ಎಂಬ ಹೇಳಿಕೆ ಬಗ್ಗೆ ಉತ್ತರಿಸಿ, "ಯಾವ ಉದ್ದೇಶಕ್ಕೆ ಈ ರೀತಿ ಹೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ನಮ್ಮ ಉದ್ದೇಶ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಷ್ಟೇ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿ, ಬದಲಾವಣೆ ಮಾಡುವ ಶಕ್ತಿ ನನ್ನ ಬಳಿ ಇಲ್ಲ, ಅದಕ್ಕೆ ಪಕ್ಷದ ಹೈಕಮಾಂಡ್ ಇದೆ" ಎಂದರು.
ಡಿ.ಕೆ. ಶಿವಕುಮಾರ್ರನ್ನು ಭೇಟಿಯಾಗದ ವಿಚಾರವಾಗಿ ಮಾತನಾಡಿ, "ನಾನೇನು ಖಾಲಿ ಇಲ್ಲ, ನಿನ್ನೆ, ಮೊನ್ನೆ ಮತ್ತು ಇವತ್ತು ಕಾರ್ಯಕ್ರಮ ಇತ್ತು. ಹಾಗಾಗಿ ಹೊರಗಡೆ ಇದ್ದೆ, ಎಲ್ಲವನ್ನೂ ಬ್ಯಾಲೆನ್ಸ್ ಮಾಡಬೇಕು. ಅಧ್ಯಕ್ಷರಿದ್ದಾರೆ ಅವರ ಜೊತೆಗೆ ಬಹಳಷ್ಟು ಟೀಮ್ಗಳು ಕೆಲಸ ಮಾಡುತ್ತಿವೆ. ನಮಗೆ ಕೊಟ್ಟ ಜವಾಬ್ದಾರಿಯನ್ನು ನಾವು ಮಾಡುತ್ತೇವೆ" ಎಂದು ಹೇಳಿದರು.
ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರ್ತಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರ ಬಗ್ಗೆ ಮಾತನಾಡಿ, "ಯಾವ ಶಾಸಕರು ಎಲ್ಲೂ ಹೋಗಲ್ಲ. ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗಲ್ಲ, ಬಿಜೆಪಿಯವರು ಕಾಂಗ್ರೆಸ್ಗೆ ಬರಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಹಿಂದೆ ಧರ್ಮಸಿಂಗ್, ಸಿದ್ದರಾಮಯ್ಯ ಕಾಲದಲ್ಲೂ ತ್ಯಾಗ ಮಾಡಿದ್ದೇನೆ: ಡಿಸಿಎಂ ಡಿಕೆಶಿ ತ್ಯಾಗದ ಮಾತು