ದಾವಣಗೆರೆ: "ಬಿ.ವೈ. ವಿಜಯೇಂದ್ರಗೆ ಅನುಭವದ ಕೊರತೆ ಇದೆ. ಹೀಗಾಗಿ ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು, ಬಸನಗೌಡ ಪಾಟೀಲ್ ಯತ್ನಾಳ್ ಅಂಥವರು ರಾಜ್ಯಾಧ್ಯಕ್ಷರಾಗಬೇಕು, ಇಲ್ಲವೇ ವಿಪಕ್ಷ ನಾಯಕ ಆಗುತ್ತಾರೆ" ಎಂದು ಹರಿಹರ ಶಾಸಕ ಬಿ. ಪಿ. ಹರೀಶ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಭಯದ ವಾತಾವರಣ ಸೃಷ್ಟಿಸುವ ಹೇಳಿಕೆ, ಬಾಲಿಶವಾಗಿದೆ. ರಮೇಶ್ ಜಾರಕಿಹೊಳಿ 17 ಶಾಸಕರನ್ನು ಬಿಜೆಪಿಗೆ ಕರೆತಂದು ಯಡಿಯೂರಪ್ಪನವರನ್ನು ಸಿಎಂ ಮಾಡಿದ್ದು ನೆನಪು ಇದೆ ಎಂದುಕೊಂಡಿದ್ದೇನೆ. ಪದೇ ಪದೆ ಪೂಜ್ಯ ತಂದೆ ಎಂದು ಹೇಳುವುದನ್ನು ಬಿಡಿ, ಪೂಜ್ಯ ತಂದೆಯವರನ್ನು ಬೇಡ ಎಂದು ಮನೆಗೆ ಕಳಿಸಿದ್ದಾರೆ, ನಿಮಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಆದರೆ ನಿಮ್ಮ ಸಾಧನೆ ಶೂನ್ಯ" ಎಂದು ಬಿ ವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ನಾನೇ ನಂಬರ್ ಒನ್ ಲೀಡರ್ : ಬಸನಗೌಡ ಪಾಟೀಲ್ ಯತ್ನಾಳ್
"ನಾಗರಾಜಗೌಡಗೆ ಶಿಕಾರಿಪುರದ ಟಿಕೆಟ್ ತಪ್ಪಿಸಿ ವಿಜಯೇಂದ್ರಗೆ ಭಿಕ್ಷೆ ಕೊಟ್ಟಿದ್ದೇವೆ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದರು. ಇದಕ್ಕೆ ವಿಜಯೇಂದ್ರ ಉತ್ತರ ಕೊಡಬೇಕಲ್ವಾ? ಇಲ್ಲ ನಾನು ನ್ಯಾಯಯುತವಾಗಿ ಗೆದ್ದಿದ್ದೇನೆ ಎಂದು ಹೇಳಬೇಕಲ್ವಾ?. ಇದರುವರೆಗೆ ಅವರು ಉತ್ತರ ಕೊಟ್ಟಿಲ್ಲ. ಇದರ ಜೊತೆಗೆ ವಿಜಯೇಂದ್ರ ತಮ್ಮ ತಂದೆಯ ಫೋರ್ಜರಿ ಸಹಿ ಮಾಡಿದ್ದಾರೆ ಎಂದು ಸಚಿವರು ಆರೋಪಿಸುತ್ತಿದ್ದಾರೆ. ಅದು ಸುಳ್ಳು ಎಂದು ವಿಜಯೇಂದ್ರ ಹೇಳಬೇಕಲ್ವಾ?" ಎಂದು ಶಾಸಕ ಬಿ ಪಿ ಹರೀಶ್ ಪ್ರಶ್ನಿಸಿದರು.
"ವಿಜಯೇಂದ್ರ ಯಾವುದಕ್ಕೂ ಉತ್ತರ ಕೊಟ್ಟಿಲ್ಲ, ಇದರಿಂದ ನಮಗೆ ನಾಚಿಕೆ ಆಗ್ತಿದೆ. ಆಡಳಿತ ಪಕ್ಷದವರು ನಿಮ್ಮದು ಬಂಡವಾಳ ಬಿಚ್ಚಲಾ ಎಂದರೆ ಅಧ್ಯಕ್ಷರು ಹಿಂಬಾಗಿಲಿನಿಂದ ಹೋಗ್ತಾರೆ. ಅವರಿಂದ ವಿಧಾನಸೌಧದಲ್ಲಿ ನಮಗೆ ಮುಜುಗರ ಆಗ್ತಿದೆ" ಎಂದು ಹೇಳಿದರು.
ಇದನ್ನೂ ಓದಿ: ಟಾರ್ಗೆಟ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಇದೆಲ್ಲದಕ್ಕೂ ಹೈಕಮಾಂಡ್ನಿಂದ ಶೀಘ್ರದಲ್ಲೇ ಇತಿಶ್ರೀ: ವಿಜಯೇಂದ್ರ