ಫಿರೋಜಾಬಾದ್ (ಉತ್ತರಪ್ರದೇಶ) :ಸರ್ಕಾರಿ ದಾಖಲೆಗಳಲ್ಲಿ ಆಗುವ ಯಡವಟ್ಟು ಒಂದೆರಡಲ್ಲ. ಮೃತರು ಬದುಕಿದ್ದು, ಬದುಕಿದವರು ಮೃತಪಟ್ಟಿದ್ದಾರೆ ಎಂಬ ನಗೆಪಾಟಲಿನ ಹಲವು ಸಂಗತಿಗಳನ್ನು ನಾವೆಲ್ಲಾ ಓದಿದ್ದೇವೆ, ಕೇಳಿದ್ದೇವೆ. ಅಂಥಹದ್ದೇ ಒಂದು ಪ್ರಮಾದದ ಘಟನೆ ಉತ್ತರಪ್ರದೇಶದ ಫಿರೋಜಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿ ವಾಸವಿದ್ದು, ಓಡಾಡಿಕೊಂಡಿರುವ ವ್ಯಕ್ತಿಯನ್ನು ಮೃತಪಟ್ಟಿದ್ದಾನೆ ಎಂದು ಗುರುತಿಸಿ, ಆತನ ಪಡಿತರ ಚೀಟಿಯನ್ನೇ ರದ್ದು ಮಾಡಲಾಗಿದೆ. ಎಂದಿನಂತೆ ಆತ ಪಡಿತರ ಪಡೆಯಲು ಹೋದಾಗ, ಅಲ್ಲಿನ ವಿತರಕ ನೀಡಿದ ಮಾಹಿತಿ ಆತನನ್ನು ಅಚ್ಚರಿಗೆ ದೂಡಿದೆ.
ಪ್ರಕರಣದ ವಿವರ:ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್ ಪ್ರದೇಶದಲ್ಲಿರುವ ಬೋಜಿಯಾ ಲಕ್ಷ್ಮಿ ನಗರ ಗ್ರಾಮದ ನಿವಾಸಿಯಾದ 60 ವರ್ಷದ ಲಜ್ಜಾ ರಾಮ್ ಅವರ ಹೆಸರನ್ನು ಪಡಿತರ ಪಟ್ಟಿಯಿಂದ ಕೈಬಿಡಲಾಗಿದೆ. ಇದಕ್ಕೆ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ನಮೂದಿಸಲಾಗಿದೆ.
ಇತ್ತೀಚೆಗೆ ಅವರು ಪಡಿತರ ಹಾಕಿಸಿಕೊಳ್ಳಲು ಅಂಗಡಿಗೆ ಹೋದಾಗ, ವಿತರಕರು ಪಡಿತರ ಚೀಟಿಯಲ್ಲಿ ತಮ್ಮ ಹೆಸರೇ ಇಲ್ಲ ಎಂದು ಹೇಳಿದ್ದಾರೆ. ಅಚ್ಚರಿಗೊಂಡ ಆತ ಕಾರಣ ಕೇಳಿದಾಗ, ನೀವು ಮೃತಪಟ್ಟಿದ್ದಾಗಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕಲ್ಲುಬಂಡೆಯಂತೆ ಎದುರಿಗೆ ನಿಂತಿದ್ದರೂ, ಮೃತಪಟ್ಟಿದ್ದಾಗಿ ತಿಳಿಸಿದ ಪಡಿತರ ವಿತರಕನಿಗೆ ರಾಮ್ ಅವರು ಜಾಡಿಸಿದ್ದಾರೆ. ಆದರೆ, ಏಜೆಂಟ್ ಮಾತ್ರ ನಡೆದ ಯಡವಟ್ಟಿನ ಬಗ್ಗೆ ಮಾಹಿತಿ ನೀಡಿದ್ದಾರೆ.