ಹಾವೇರಿ: ನಗರದ ಶಿವಲಿಂಗೇಶ್ವರ ತರಕಾರಿ ಮಾರುಕಟ್ಟೆ ಸೇರಿದಂತೆ ಇಂದು ಬೆಳ್ಳಂಬೆಳಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸಾರ್ವಜನಿಕರ ಮತ್ತು ರೈತರ ಸಮಸ್ಯೆ ಆಲಿಸಿದರು.
ಶಿವಲಿಂಗೇಶ್ವರ ತರಕಾರಿ ಮಾರುಕಟ್ಟೆ ಭೇಟಿ ವೇಳೆ ದಲ್ಲಾಳಿಗಳ ಕಮೀಷನ್ ಹಾವಳಿಗೆ ಗರಂ ಆದ ಉಪ ಲೋಕಾಯುಕ್ತರು, ಸರಿಯಾದ ಜಿಎಸ್ಟಿ ನಂಬರ್ ಇಲ್ಲದ ಬಿಲ್ ಬುಕ್, ಬಿಲ್ ನೀಡದೇ ತರಕಾರಿ ಮಾರಾಟ ಮಾಡುತ್ತಿದ್ದ ಏಜೆಂಟರನ್ನು ತರಾಟೆಗೆ ತಗೆದುಕೊಂಡರು.
ಒಂದು ಬಾಕ್ಸ್ ತರಕಾರಿಗೆ 10 ರೂಪಾಯಿ ಕಮೀಷನ್ ತೆಗೆದುಕೊಳ್ಳುತ್ತಿದ್ದ ದಲ್ಲಾಳಿಗಳ ಕ್ರಮಕ್ಕೆ ಹಾಗೂ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಕ್ಕೆ ಬೇಸರ ವ್ಯಕ್ತಪಡಿಸಿ, ಎಪಿಎಂಸಿಯ ಕಾರ್ಯದರ್ಶಿಯನ್ನು ಕರೆದು ಸ್ಥಳದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡರು.
ನಂತರ ನಗರದ ಕೆಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಪಾರ್ಕಿಂಗ್ ಸ್ಥಳ, ಬಿಲ್ ಬುಕ್ ಚೆಕ್ ಮಾಡಿದರು. ಬೈಕ್, ಕಾರುಗಳಿಗೆ ಮನಬಂದಂತೆ ಹಣ ಪಡೆಯುತ್ತಿದ್ದ ಟೆಂಡರ್ದಾರನಿಗೆ ಅಲ್ಲಿಯೂ ಸಹ ತರಾಟೆ ತಗೆದುಕೊಂಡರು. ಯಾವುದೇ ಸಮಯದಲ್ಲಿ ಬಂದರು 30 ರೂಪಾಯಿ ಹೇಗೆ ತೆಗೆದುಕೊಳ್ಳುತ್ತೀರಿ? ಎಂದು ಪ್ರಶ್ನಿಸುವ ಮೂಲಕ ಪುಸ್ತಕ ಸರಿಯಾಗಿ ನಿರ್ವಹಣೆ ಮಾಡುವಂತೆ ತಾಕೀತು ಮಾಡಿದರು.
ಬಸ್ ನಿಲ್ದಾಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿರುವ ಕುರಿತಂತೆ ಕೆಸ್‌ಆರ್‌ಟಿಸಿ ಡಿಸಿಗೆ ಮಾಹಿತಿ ಕೇಳಿದರು. ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದಿರುವುದು, ಪ್ರಯಾಣಿಕರಿಗೆ ಸರಿಯಾದ ಸೌಲಭ್ಯಗಳಿಲ್ಲದಿರುವುದನ್ನು ಕಂಡು ಗರಂ ಆದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಾವೇರಿ ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನಗಳಕಾಲ ಅವರು ವಿವಿಧ ಇಲಾಖೆ ಕಚೇರಿಗಳಿಗೆ ಭೇಟಿ ನೀಡಲಿದ್ದು, ಸರ್ಕಾರಿ ಕಚೇರಿಗಳ ವ್ಯವಸ್ಥೆ ಹಾಗೂ ಭ್ರಷ್ಟಾಚಾರ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ 87 ವಿವಿಧ ಬಗೆಯ ಪ್ರಕರಣ ಇತ್ಯರ್ಥಪಡಿಸಿದ ಉಪಲೋಕಾಯುಕ್ತರು - JUSTICE B VEERAPPA