ಮುಂಬೈ (ಮಹಾರಾಷ್ಟ್ರ): ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಭಾಷಣದ ವೇಳೆ ಗಡ್ಕರಿ ಅವರಿಗೆ ತಲೆಸುತ್ತು ಬಂದು ವೇದಿಕೆಯ ಮೇಲೆ ಬೀಳಲಾರಂಭಿಸಿದರು. ಮೂಲಗಳು ಮತ್ತು ದೃಶ್ಯಗಳ ಪ್ರಕಾರ, ಯವತ್ಮಾಲ್ ಪುಸಾದ್‌ನಲ್ಲಿ ಭಾಷಣ ಮಾಡುವಾಗ ಗಡ್ಕರಿ ಅವರಿಗೆ ಇದ್ದಕ್ಕಿದ್ದಂತೆ ತಲೆತಿರುಗಲು ಪ್ರಾರಂಭಿಸಿದ್ದು, ಕೂಡಲೇ ನೆಲಕ್ಕೆ ಕುಸಿದು ಬಿದ್ದರು.
ವಿಡಿಯೋದಲ್ಲಿ ಕೆಲವರು ಗಡ್ಕರಿ ಅವರನ್ನು ಹಿಡಿಯುತ್ತಿರುವುದು ಕಂಡು ಬಂದಿದೆ. ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಯವತ್ಮಾಲ್-ವಾಶಿಮ್ ಲೋಕಸಭಾ ಕ್ಷೇತ್ರದಿಂದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯಿಂದ ಬಿಜೆಪಿ-ಮಹಾಯುತಿ ಅಭ್ಯರ್ಥಿ ರಾಜಶ್ರೀ ಪಾಟೀಲ್ ಪರ ಗಡ್ಕರಿ ಪ್ರಚಾರ ನಡೆಸುತ್ತಿದ್ದರು. ನಿತಿನ್ ಗಡ್ಕರಿ ಭಾಷಣ ಮಾಡಲು ವೇದಿಕೆ ತಲುಪಿದರು. ಬಳಿಕ ಭಾಷಣ ಮುಂದುವರಿಸುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ಬಿದ್ದರು. ಇದಾದ ನಂತರ ಅಲ್ಲಿದ್ದ ಪಕ್ಷದ ಕಾರ್ಯಕರ್ತರು ಮುಖಕ್ಕೆ ನೀರು ಎರಚಿ ವೇದಿಕೆಯಿಂದ ಆಸ್ಪತ್ರೆಗೆ ಕಡೆಗೆ ಕರೆದೊಯ್ದರು. ನಂತರ ಅವರಿಗೆ ವೈದ್ಯಕೀಯ ನೆರವು ನೀಡಲಾಯಿತು.
ಮಹಾರಾಷ್ಟ್ರದ ಪುಸಾದ್‌ನಲ್ಲಿ ನಡೆದ ರ‍್ಯಾಲಿ ವೇಳೆ ಬಿಸಿಲಿನ ತಾಪದಿಂದ ಆರೋಗ್ಯ ಹದಗೆಟ್ಟಿತ್ತು. ಆದರೆ ಈಗ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ಮುಂದಿನ ಸಭೆಗೆ ಹಾಜರಾಗಲು ವರುದ್‌ಗೆ ಹೊರಡುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು ಎಂದು ನಿತಿನ್ ಗಡ್ಕರಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.