ಕರ್ನಾಟಕ

karnataka

ETV Bharat / bharat

ತಿರುಪತಿ ಲಡ್ಡು ವಿವಾದ: ಕಾಲ್ನಡಿಗೆಯಲ್ಲಿ ತಿರುಮಲ ದೇವಸ್ಥಾನಕ್ಕೆ ತೆರಳಿದ ಪವನ್ ಕಲ್ಯಾಣ್ - Tirupati Laddu Row - TIRUPATI LADDU ROW

ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಮಂಗಳವಾರ ಸಂಜೆ ತಿರುಮಲ ದೇವಸ್ಥಾನಕ್ಕೆ ಕಾಲ್ನಡಿಗೆಯ ಮೂಲಕ ಪ್ರಯಾಣ ಬೆಳೆಸಿದ್ದಾರೆ.

ಕಾಲ್ನಡಿಗೆಯಲ್ಲಿ ತಿರುಮಲ ದೇವಸ್ಥಾನಕ್ಕೆ ತೆರಳಿದ ಪವನ್ ಕಲ್ಯಾಣ್
ಕಾಲ್ನಡಿಗೆಯಲ್ಲಿ ತಿರುಮಲ ದೇವಸ್ಥಾನಕ್ಕೆ ತೆರಳಿದ ಪವನ್ ಕಲ್ಯಾಣ್ (IANS)

By ETV Bharat Karnataka Team

Published : Oct 1, 2024, 8:04 PM IST

ತಿರುಪತಿ: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಮಂಗಳವಾರ ಸಂಜೆ ತಿರುಮಲ ದೇವಸ್ಥಾನಕ್ಕೆ ಕಾಲ್ನಡಿಗೆಯ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಅಲಿಪಿರಿ ಪಾದಲ ಮಂಟಪದಲ್ಲಿ ಪೂಜೆ ಸಲ್ಲಿಸಿದ ನಂತರ ಅವರು ತಿರುಮಲಕ್ಕೆ ತಮ್ಮ ಪ್ರಯಾಣ ಪ್ರಾರಂಭಿಸಿದರು. ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರನ ದರ್ಶನ ಪಡೆದು, ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರಾಯಶ್ಚಿತ್ತವಾಗಿ 11 ದಿನಗಳಿಂದ ನಡೆಸುತ್ತಿರುವ ತಮ್ಮ ಪ್ರಾಯಶ್ಚಿತ್ತ ದೀಕ್ಷಾ ಅಭಿಯಾನವನ್ನು ಪವನ್ ಕಲ್ಯಾಣ್ ಕೊನೆಗೊಳಿಸಲಿದ್ದಾರೆ.

ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್​ ಅವರನ್ನು ಸ್ವಾಗತಿಸಲು ಜನಸೇನಾ ಮತ್ತು ಅದರ ಮಿತ್ರ ಪಕ್ಷಗಳಾದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಬಹಳಷ್ಟು ಸಂಖ್ಯೆಯ ನಾಯಕರು ಮತ್ತು ಕಾರ್ಯಕರ್ತರು ಅಲಿಪಿರಿಯಲ್ಲಿ ಜಮಾಯಿಸಿದ್ದರು. ಪೊಲೀಸರು ಮತ್ತು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಿಬ್ಬಂದಿಯ ಬಿಗಿ ಭದ್ರತೆಯ ನಡುವೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ತಮ್ಮ ಕಾಲ್ನಡಿಗೆ ಯಾತ್ರೆಯನ್ನು ಪ್ರಾರಂಭಿಸಿದರು. ದರ್ಶನದ ನಂತರ, ಪವನ್ ಕಲ್ಯಾಣ್ ಅನ್ನ ಪ್ರಸಾದಂ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.

ಗುಂಟೂರು ಜಿಲ್ಲೆಯ ನಂಬೂರಿನ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಂದು ಪುರೋಹಿತರಿಂದ ಪೂಜೆ ಮತ್ತು ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದ ನಂತರ ಪವನ್ ಕಲ್ಯಾಣ್ ದೀಕ್ಷಾ ಅಭಿಯಾನವನ್ನು ಪ್ರಾರಂಭಿಸಿದರು. ಹಿಂದೆ ಅಧಿಕಾರದಲ್ಲಿದ್ದವರು ಮಾಡಿದ ಪಾಪಗಳನ್ನು ಶುದ್ಧೀಕರಿಸುವ ಶಕ್ತಿಯನ್ನು ನೀಡುವಂತೆ ದೇವರನ್ನು ಪ್ರಾರ್ಥಿಸಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆಯುವುದಾಗಿ ಆವಾಗ ಅವರು ಹೇಳಿದ್ದರು.

ಮೀನಿನ ಎಣ್ಣೆ ಮತ್ತು ಪ್ರಾಣಿಗಳ ಕೊಬ್ಬಿನೊಂದಿಗೆ ಕಲಬೆರಕೆ ಮಾಡಿದ ತುಪ್ಪವನ್ನು ಲಡ್ಡು ಪ್ರಸಾದಕ್ಕೆ ಬಳಸಿದ ಆರೋಪಗಳ ಬಗ್ಗೆ ವೈಯಕ್ತಿಕವಾಗಿ ನೋವಾಗಿರುವುದರಿಂದ ಪ್ರಾಯಶ್ಚಿತ್ತ ದೀಕ್ಷಾ ಕೈಗೊಂಡಿರುವುದಾಗಿ ಅವರು ಹೇಳಿದ್ದರು. ವೈಎಸ್ಆರ್ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಪ್ರಾಣಿಗಳ ಕೊಬ್ಬಿನೊಂದಿಗೆ ಕಲಬೆರಕೆ ಮಾಡಿದ ತುಪ್ಪವನ್ನು ಲಡ್ಡು ಪ್ರಸಾದ ತಯಾರಿಸಲು ಬಳಸಲಾಗುತ್ತಿತ್ತು ಎಂದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸೆಪ್ಟೆಂಬರ್ 18ರಂದು ಆರೋಪಿಸಿದ್ದರು. ಆರೋಪಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದೆ.

ಆದರೆ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ದ್ವಾರಕಾ ತಿರುಮಲ ರಾವ್ ಮಂಗಳವಾರ ಪ್ರಕಟಿಸಿದ್ದಾರೆ. ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ವೈಎಸ್ಆರ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಸಾಬೀತು ಪಡಿಸುವ ಯಾವುದೇ ಸಾಕ್ಷಗಳು ಇಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಅಕ್ಟೋಬರ್​ 3ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ತನಿಖೆ ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್​ ಎಸ್ಐಟಿಗೆ ಮೌಖಿಕವಾಗಿ ಕೇಳಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್​ನಲ್ಲಿ ತಿರುಪತಿ ಲಡ್ಡು ಕಲಬೆರಕೆ ಕೇಸ್​: ತನಿಖೆ ನಿಲ್ಲಿಸಿದ SIT - Tirupati Laddu Adulteration Case

ABOUT THE AUTHOR

...view details