ಹೈದರಾಬಾದ್: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯತಿಥಿಯಾದ ಮೇ.21 ರಂದು ಪ್ರತಿ ವರ್ಷ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ. ಅವರನ್ನು 21 ಮೇ 1991 ರಂದು ಹತ್ಯೆ ಮಾಡಲಾಗಿತ್ತು. ಈ ದಿನವು ಭಯೋತ್ಪಾದನೆ ನಿರ್ಮೂಲನೆ, ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಮಹತ್ವವನ್ನು ಸಾರುತ್ತದೆ.
ಭಯೋತ್ಪಾದನಾ ವಿರೋಧಿ ದಿನದ ಇತಿಹಾಸ: ಚೆನ್ನೈನಿಂದ 50 ಕಿಮೀ ದೂರದಲ್ಲಿರುವ ಶ್ರೀಪೆರಂಬದೂರಿನಲ್ಲಿ 1991 ಮೇ.21ರಂದು ರಾತ್ರಿ ಸುಮಾರು 10.20ಕ್ಕೆ ಚುನಾವಣಾ ರ್‍ಯಾಲಿ ನಡೆಸುತ್ತಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಗೆ ಸೇರಿದ ಆತ್ಮಾಹುತಿ ಬಾಂಬರ್ ಹತ್ಯೆ ಮಾಡಿದ್ದರು. ಆತ್ಮಾಹುತಿ ಬಾಂಬರ್ ಬೆಲ್ಟ್ ಬಾಂಬ್ ಸ್ಫೋಟಿಸಿ ರಾಜೀವ್ ಗಾಂಧಿ ಜೊತೆಗೆ ಇತರ 16 ಜನರನ್ನು ಬಲಿ ಪಡೆದಿದ್ದರು.
ರಾಜೀವ್ ಗಾಂಧಿ ಹತ್ಯೆಗೆ ಕಾರಣವೇನು?: ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ, ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ವೈಯಕ್ತಿಕ ದ್ವೇಷದ ಕಾರಣದಿಂದ ರಾಜೀವ್ ಗಾಂಧಿಯವರ ಹತ್ಯೆ ಮಾಡಲಾಗಿದೆ. ರಾಜೀವ್ ಗಾಂಧಿಯವರ ಹತ್ಯೆಯನ್ನು ಟಾಡಾ ಕಾಯಿದೆಯ ಅಡಿಯಲ್ಲಿ ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಲಾಗಿಲ್ಲ, ಏಕೆಂದರೆ ಪುರಾವೆಗಳು ಮತ್ತು ಹಂತಕರ ಯೋಜನೆಯು ರಾಜೀವ್ ಗಾಂಧಿಯನ್ನು ಹೊರತುಪಡಿಸಿ ಬೇರೆ ಯಾವುದೇ ಭಾರತೀಯ ನಾಗರಿಕರನ್ನು ಕೊಲ್ಲವ ಉದ್ದೇಶ ಹೊಂದಿರಲಿಲ್ಲ.
ಭಯೋತ್ಪಾದನೆ ಕೇವಲ ಒಂದು ಪದವಲ್ಲ, ಇದು ಮಾನವೀಯತೆ ಮತ್ತು ವಿಶ್ವ ಶಾಂತಿಗೆ ಬೆದರಿಕೆಯಾಗಿದೆ. ಭಾರತವು ಸ್ವಾತಂತ್ರ್ಯ ಬಂದಾಗಿನಿಂದಲೂ ಭಯೋತ್ಪಾದನೆಯ ಪಿಡುಗನ್ನು ಎದುರಿಸುತ್ತಿದೆ. ಭಾರತದಲ್ಲಿ ಭಯೋತ್ಪಾದನೆಯ ಇತಿಹಾಸವನ್ನು 1980 ರ ದಶಕದಲ್ಲಿ ಪಂಜಾಬ್‌ನಲ್ಲಿನ ಖಲಿಸ್ತಾನ್ ಚಳುವಳಿಯಿಂದ ಗುರುತಿಸಬಹುದು. ಭಾರತದ ಸ್ವಾತಂತ್ರ್ಯದ ನಂತರ, ಸಿಖ್ಖರ ಪ್ರತ್ಯೇಕ ರಾಜ್ಯದ ಬೇಡಿಕೆಯು ಪಂಜಾಬ್ ರಚನೆಗೆ ಕಾರಣವಾಯಿತು.
ಭಯೋತ್ಪಾದಕರು ಪ್ರತ್ಯೇಕ 'ಖಾಲಿಸ್ತಾನ'ಕ್ಕೆ ಬೇಡಿಕೆ ಇಟ್ಟಾಗ ಅದು ಮತ್ತಷ್ಟು ತೀವ್ರಗೊಂಡಿತು. ಖಲಿಸ್ತಾನ್ ಸಮಸ್ಯೆಯು ಅಮೃತಸರದಲ್ಲಿ ಆಪರೇಷನ್ ಬ್ಲೂ ಸ್ಟಾರ್‌ಗೆ ಕಾರಣವಾಯಿತು, ನಂತರ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ, ಸರಣಿ ರಾಜಕೀಯ ಕೊಲೆಗಳು ಮತ್ತು ಗಲಭೆಗಳಲ್ಲಿ ಸಾವಿರಾರು ಸಿಖ್ಖರು ಮತ್ತು ಇತರ ಜನರ ಹತ್ಯೆಯಾಯಿತು.
ಪಂಜಾಬ್ ನಂತರ, ಎಂಭತ್ತರ ದಶಕದ ಉತ್ತರಾರ್ಧದಲ್ಲಿ ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಬೆಂಬಲಿತ ಭಾರತ ವಿರೋಧಿ ಪ್ರತ್ಯೇಕತಾವಾದಿ ಶಕ್ತಿಗಳಿಂದ ಭಯೋತ್ಪಾದನೆ ಪ್ರಾರಂಭವಾಯಿತು. ಭಯೋತ್ಪಾದಕ ಗುಂಪುಗಳು ಮುಖ್ಯವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಕಾರ್ಯನಿರ್ವಹಿಸುತ್ತಿದ್ದವು. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಎಲ್ಇಟಿ, ಜೆಎಂ, ಹಿಜ್ಬುಲ್ ಮುಜಾಹಿದ್ದೀನ್ ಮುಂತಾದ ಗುಂಪುಗಳು ಸೃಷ್ಟಿಸಿವೆ. 2001 ಮತ್ತು 2008 ರ ಮುಂಬೈ ದಾಳಿ, ಭಾರತೀಯ ಸಂಸತ್ ದಾಳಿಯಲ್ಲಿ ಎಲ್ಇಟಿ ಭಾಗಿಯಾಗಿದೆ. ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಇದು ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈಗ ಬಹುತೇಕ ಎಲ್ಲಾ ದೇಶಗಳು ಭಯೋತ್ಪಾದನೆಯ ಪಿಡುಗನ್ನು ನಿಭಾಯಿಸಲು ಪ್ರಯತ್ನಿಸುತ್ತಿವೆ.
ಭಾರತದಲ್ಲಿ ನಡೆದ ಪ್ರಮುಖ ಭಯೋತ್ಪಾದಕ ದಾಳಿಗಳು:
ಪುಲ್ವಾಮಾ ದಾಳಿ 2019
ಉರಿ ದಾಳಿ 2016
26/11 ಮುಂಬೈ ದಾಳಿ 2008
2008ರ ಜೈಪುರ ಸ್ಫೋಟ
ಮುಂಬೈ ರೈಲು ಬಾಂಬ್ ದಾಳಿ 2006
ದೆಹಲಿ ಬಾಂಬ್ ಸ್ಫೋಟ, 2005
2001- ಸಂಸತ್ ದಾಳಿ 2001