ಕೋಲ್ಕತ್ತಾ/ದೆಹಲಿ:ದಟ್ಟ ಮಂಜು ಕವಿದ ಕಾರಣ ವೀಕ್ಷಣಾ ಸಾಮರ್ಥ್ಯ ಕ್ಷೀಣಿಸಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ವಿಮಾನ ನಿಲ್ದಾಣದಲ್ಲಿ 60 ವಿಮಾನಗಳ ಹಾರಾಟ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 7.10ರಿಂದ 9ರವರೆಗೆ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ವಿಮಾನ ದಟ್ಟನೆ ಕಂಡುಬರಲಿಲ್ಲ. ನಿಲ್ದಾಣಕ್ಕೆ ಆಗಮಿಸಬೇಕಿದ್ದ ಸುಮಾರು 30 ವಿಮಾನಗಳು ಹಾಗೂ ಹೊರಡಬೇಕಿದ್ದ 30 ವಿಮಾನಗಳು ವಿಳಂಬಗೊಂಡಿವೆ ಎಂದು ನಿಲ್ದಾಣದ ನಿರ್ದೇಶಕರು ಹೇಳಿದರು. ಇದೇ ವೇಳೆ ಕೋಲ್ಕತ್ತಾಗೆ ಆಗಮಿಸಬೇಕಿದ್ದ 5 ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ.
ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ನಿಲ್ದಾಣದ ಟರ್ಮಿನಲ್ನಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆಯ ಬಳಿಕ ವೀಕ್ಷಣಾ ಸಾಮರ್ಥ್ಯ ಸುಧಾರಣೆ ಕಂಡಿದೆ. ದುಬೈನಿಂದ ಎಮಿರೇಟ್ ವಿಮಾನ ಬೆಳಗ್ಗೆ 9ಕ್ಕೆ ನಿಲ್ದಾಣಕ್ಕೆ ಆಗಮಿಸಿತು ಎಂದು ಅವರು ಮಾಹಿತಿ ನೀಡಿದರು.
ಜನವರಿ 6ರಿಂದ 10ರವರೆಗೆ ಕನಿಷ್ಠ 7 ಡಿಗ್ರಿ ಸೆಲ್ಸಿಯಸ್ನಿಂದ 18 ಡಿಗ್ರಿ ಸೆಲ್ಸಿಯಸ್ ತಾಪಮಾನವಿರಲಿದೆ. ಜನವರಿ 7ರಿಂದ 9ರವರೆಗೆ ಸಾಧಾರಣ ದಟ್ಟ ಮಂಜು ಇರಲಿದ್ದು, ಜನವರಿ 11ರಂದು ಮಳೆ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.