ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಇದುವರೆಗೆ 10 ಕೋಟಿ ಯಾತ್ರಾರ್ಥಿಗಳು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಜನವರಿ 13 ರಿಂದ ಆರಂಭವಾಗಿರುವ ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮದಲ್ಲಿ ಅಸಂಖ್ಯಾತ ಜನರು ಗಂಗಾ, ಯಮುನಾ ಮತ್ತು ಪೌರಣಿಕ ಸರಸ್ವತಿ ನದಿ ಸೇರುವ ಸಂಗಮದಲ್ಲಿ ಪವಿತ್ರ ಸ್ನಾನ ನಡೆಸುತ್ತಿದ್ದು, 10 ದಿನಗಳಿಂದ ಸಾಗುತ್ತಿರುವ ಈ ಕಾರ್ಯಕ್ರಮದಲ್ಲಿ 10 ಕೋಟಿ ಜನರು ಸ್ನಾನ ಮಾಡಿದ್ದು, ಗುರುವಾರ ಮಧ್ಯಾಹ್ನ 12 ಗಂಟೆಗೆ ಈ ಮೈಲಿಗಲ್ಲು ಮುಟ್ಟಿದೆ ಎಂದು ಸರ್ಕಾರ ತಿಳಿಸಿದೆ.
ನಿರಂತರವಾಗಿ ಏರಿಕೆಯಾಗುತ್ತಿದೆ ಯಾತ್ರಿಕರ ಸಂಖ್ಯೆ: ಪ್ರಯಾಗ್ ರಾಜ್ ಭೇಟಿ ನೀಡುತ್ತಿರುವ ಯಾತ್ರಾರ್ಥಿಗಳ ಸಂಖ್ಯೆ ನಿರಂತರವಾಗಿ ಏರಿಕೆ ಕಾಣುತ್ತಿದ್ದು, ಪ್ರತಿನಿತ್ಯ ಲಕ್ಷಾಂತರ ಜನರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಈ ಸಂಖ್ಯೆ ಕೋಟಿಗಳನ್ನು ದಾಟಿದೆ. ಇದೀಗ 10 ಕೋಟಿ ತಲುಪುವ ಮೂಲಕ ಮಹಾಕುಂಭ ಗಮನಾರ್ಹ ಮೈಲಿಗಲ್ಲು ಮುಟ್ಟಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಮಹಾ ಕುಂಭ ಮೇಳ ಆರಂಭಕ್ಕೆ ಮೊದಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವೂ, ಈ ವರ್ಷದ ಈ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ 45 ಕೋಟಿ ಜನರು ಭೇಟಿ ನೀಡಬಹುದು ಎಂದು ಅಂದಾಜಿಸಿದೆ.
ಪ್ರಯಾಗ್ ರಾಜ್ಗೆ ಭೇಟಿ ನೀಡುತ್ತಿರುವ ಭಕ್ತರು ಅತ್ಯುತ್ಸಾಹದಿಂದ ಬೇಟಿ ನೀಡುತ್ತಿದ್ದು, ದೇಶ ಮಾತ್ರವಲ್ಲದೇ ವಿದೇಶಗಳಿಂದ ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ನಡೆಸುತ್ತಿದ್ದಾರೆ. ಗುರುವಾರ ಒಂದೇ ದಿನ ಮಧ್ಯಾಹ್ನ 12ರ ಹೊತ್ತಿಗೆ 10 ಲಕ್ಷ ಕಲ್ಪವಸಿಗಳು ಸೇರಿದಂತೆ 30 ಲಕ್ಷ ಜನರು ಸ್ನಾನ ನಡೆಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಂಕ್ರಾಂತಿ ದಿನ 3.5 ಕೋಟಿ ಜನರಿಂದ ಪುಣ್ಯಸ್ನಾನ: ಕಳೆದ 10 ದಿನಗಳ ಹಿಂದೆ ಆರಂಭವಾದ ಮಹಾ ಕುಂಭ ಮೇಳದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ನಾನ ಮಾಡಿದ್ದು, ಮಕರ ಸಂಕ್ರಾಂತಿಯಂದು. ಅಂದು ಒಂದೇ ದಿನ 3.5 ಕೋಟಿ ಜನರು ಸ್ನಾನ ನಡೆಸಿದ್ದು, ಪುಷ್ಯ ಪೂರ್ಣಿಮಾ ಹಬ್ಬದಂದು 1.7 ಕೋಟಿ ಜನರು ಭಾಗಿಯಾಗಿದ್ದರು.
ಇಷ್ಟು ಅಪಾರ ಪ್ರಮಾಣದಲ್ಲಿ ಪ್ರಯಾಗ್ ರಾಜ್ಗೆ ಜನರು ಭೇಟಿ ನೀಡುತ್ತಿದ್ದರೂ ನಗರದ ದೈನಂದಿನ ಜನ ಜೀವನದ ಮೇಲೆ ಯಾವುದೇ ಒತ್ತಡ ಉಂಟಾಗಿಲ್ಲ. ಪವಿತ್ರ ಸ್ನಾನಕ್ಕೆ ವಿಶೇಷವಾದ ದಿನಗಳಲ್ಲಿ ಮಾತ್ರ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದು, ಶಾಲೆ, ಉದ್ಯಮಗಳು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಉದ್ಯೋಗ ಸೃಷ್ಟಿಯ ಜೊತೆಗೆ ನಿರುದ್ಯೋಗ ಕೊನೆಗೊಳಿಸುವುದು ನಮ್ಮ ಮೊದಲ ಆಯ್ಕೆ: ಕೇಜ್ರಿವಾಲ್ ಪ್ರತಿಜ್ಞೆ
ಇದನ್ನೂ ಓದಿ: ಲಡಾಖ್ನ ಗಾಲ್ವಾನ್ ಕಣಿವೆ ಶೀಘ್ರದಲ್ಲೇ ಪ್ರವಾಸಿಗರಿಗೆ ಮುಕ್ತ; ಭರದ ಕಾರ್ಯಾಚರಣೆ