ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನಾರೋಗ್ಯಕ್ಕೆ ಒಳಗಾಗಿದ್ದು, ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಗೈರಾಗಿದ್ದರು. ಇದರ ಬೆನ್ನಲ್ಲೇ ಇದೀಗ ಅವರು ರಾಷ್ಟ್ರ ರಾಜಧಾನಿಯ ವಿಧಾನಸಭಾ ಚುನಾವಣಾ ಪ್ರಚಾರದಿಂದಲೂ ಹೊರಗುಳಿಯಲು ನಿರ್ಧರಿಸಿದ್ದಾರೆ. ನವದೆಹಲಿಯ ಮುಸ್ತಫಾಬಾದ್ನಲ್ಲಿ ಆಯೋಜಿಸಿದ್ದ ಚುನಾವಣಾ ರ‍್ಯಾಲಿಯನ್ನು ರದ್ದು ಗೊಳಿಸಲಾಗಿದೆ. ರಾಹುಲ್ ಗಾಂಧಿ ಅವರು ಹುಷಾರಿಲ್ಲದ ಹಿನ್ನೆಲೆ ವೈದ್ಯಕೀಯ ಸಲಹೆಗೆ ಒಳಗಾಗಿದ್ದು, ಅವರು ಪ್ರಚಾರ ಸಭೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್ ತಿಳಿಸಿದ್ದಾರೆ.
ಯಾವುದೇ ಗಾಳಿ ಸುದ್ದಿಗೆ ಕಿವಿಕೊಡಬೇಡಿ: ಇನ್ನು ರಾಹುಲ್ ಗಾಂಧಿ ಚುನಾವಣಾ ಪ್ರಚಾರಗಳ ರದ್ದು ಮಾಡುವ ಮೂಲಕ ಮುಸ್ಲಿಂ ಮತಗಳು ವಿಭಜನೆಯಾಗದಂತೆ ತಡೆದು ಎಎಪಿ ಸಹಾಯ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂಬ ಊಹಾಪೋಹವನ್ನು ಇದೇ ವೇಳೆ ಅವರು ತಳ್ಳಿ ಹಾಕಿದರು. ಇವೆಲ್ಲವೂ ಗಾಳಿ ಸುದ್ದಿಯಾಗಿದ್ದು, ನಾವು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇವೆ ಎಂದರು.
ಜನವರಿ 26 ರ ಬಳಿಕ ಪ್ರಚಾರ: ಗಣರಾಜ್ಯೋತ್ಸವದ ಬಳಿಕ ನಮ್ಮ ನಾಯಕರು ದೆಹಲಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿಧಾನಸಭಾ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದರು. ಎಎಪಿ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಇದೆ ಎಂದು ಆರೋಪಿಸಿದ ಯಾದವ್, ಕಾಂಗ್ರೆಸ್ ಯಾವುದೇ ಪ್ರಚಾರ ಸಭೆ ನಡೆಸದಿದ್ದಾಗ ದೊಡ್ಡಣ್ಣ (ಬಿಜೆಪಿ) ನಾವು ಚಿಕ್ಕ ತಮ್ಮನಿಗೆ (ಎಎಪಿಗೆ) ಸಹಾಯ ಮಾಡುತ್ತಿದ್ದೇವೆ ಎಂದು ಆರೋಪಿಸುತ್ತಾರೆ. ತಮ್ಮ (ಎಎಪಿ) ದೊಡ್ಡ ಅಣ್ಣ (ಬಿಜೆಪಿ) ವಿರುದ್ಧ ಹೋರಾಟಕ್ಕೆ ಬೆಂಬಲಿಸುವುದಿಲ್ಲ ಎಂದು ಆರೋಪಿಸುತ್ತಾರೆ ಎಂದು ಇದೇ ವೇಳೆ ಎರಡೂ ಪಕ್ಷಗಳ ವಿರುದ್ಧ ಹರಿಹಾಯ್ದರು.
ಜನವರಿ 22ರಿಂದ ಮೂರು ದಿನಗಳ ಪ್ರಚಾರ ಸಭೆಯನ್ನು ಗಾಂಧಿ ನಡೆಸಲಿದ್ದು, ಇದು ಚುನಾವಣೆಗೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ಕಾಂಗ್ರೆಸ್ ಈ ಮೊದಲು ತಿಳಿಸಿತ್ತು. ಆದರೆ, ಇದರಲ್ಲಿ ಎರಡು ಚುನಾವಣಾ ಪ್ರಚಾರ ಸಭೆ ರದ್ದು ಗೊಂಡಿದೆ. ಬುಧವಾರ ಜನವರಿ 22ರ ಸಭೆಗೆ ಗೈರಾಗಿದ್ದು, ಇದೀಗ ಶುಕ್ರವಾರ ಜನವರಿ 24ರಂದು ಪಶ್ಚಿಮ ದೆಹಲಿಯ ಚುನಾವಣಾ ಪ್ರಚಾರದಲ್ಲಿ ಅವರು ಭಾಗಿಯಾಗುತ್ತಿಲ್ಲ
ಬುಧವಾರ ಸದರ್ ಬಜಾರ್ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭಗೂ ಅವರು ಗೈರಾಗಿದ್ದರು. ರಾಹುಲ್ ಅಗೈರಿನಲ್ಲಿ ಮತದಾರರಿಗೆ ಅವರ ಸಂದೇಶವನ್ನು ಯಾದವ್ ಓದಿ ತಿಳಿಸಿದ್ದರು. ಅದರಲ್ಲಿ ನನ್ನನ್ನು ಪ್ರೀತಿಸುವ ಸಾವಿರರಾರು ಜನರು ಈ ಸಭೆಗೆ ಬಂದಿರುತ್ತೀರಿ. ನಿಮಗೆ ನನ್ನ ಶುಭಾಶಯಗಳು ನಾನು ಈ ಸಭೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸುತ್ತೇನೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಮಹಾಕುಂಭಮೇಳದಲ್ಲಿ 10 ದಿನದಲ್ಲಿ 10 ಕೋಟಿ ಜನರಿಂದ ಪವಿತ್ರ ಸ್ನಾನ: ಉತ್ತರಪ್ರದೇಶ ಸರ್ಕಾರ