ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒತ್ತಡಕ್ಕೆ ಮಣಿದು ಮುಡಾ ಪ್ರಕರಣದಲ್ಲಿ ಲೋಕಾಯುಕ್ತರಿಂದ ಕ್ಲೀನ್ ಚಿಟ್ ನೀಡುವ ಸಾಧ್ಯತೆ ಇದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವರದಿ ಆದಂತೆ ಮುಡಾ ಹಗರಣದಲ್ಲಿ ಲೋಕಾಯುಕ್ತ ಸಂಸ್ಥೆ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಕೊಟ್ರೆ, ನಾವು ಕಳೆದ ಕೆಲವು ತಿಂಗಳಿಂದ ವ್ಯಕ್ತಪಡಿಸುತ್ತಿದ್ದ ಅನುಮಾನ ನಿಜವಾದಂತೆ ಆಗುತ್ತದೆ ಎಂದರು.
ಬಿಜೆಪಿಯಿಂದ ತನಿಖೆ ಸರಿಯಾಗಿಲ್ಲ ಅಂತ ಆರೋಪವನ್ನು ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯನವರಿಗೆ ಕ್ಲೀನ್ ಚಿಟ್ ಕೊಟ್ಟರೆ ನಮ್ಮ ಆರೋಪ ಸತ್ಯ ಆದಂತೆ ಆಗುತ್ತದೆ. ಇಲ್ಲಿ ರಾಜಕೀಯ ಒತ್ತಡಕ್ಕೆ ಅಧಿಕಾರಿಗಳು ಮಣಿದಿದ್ದಾರೆ ಅನ್ನುವುದು ನಿಜವಾದಂತೆ ಆಗುತ್ತದೆ ಎಂದು ಹೇಳಿದರು.
ಇಡಿ ಅಧಿಕಾರಿಗಳು ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದು, ಮುಡಾದಲ್ಲಿ ಎಷ್ಟು ಹಗರಣ ಆಗಿದೆ ಅಂತಾ ತಿಳಿದು ಬರುತ್ತಿದೆ. ಹೈಕೋರ್ಟ್ ಕೂಡ ಹಗರಣದ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಮಾಹಿತಿ ಸಂಗ್ರಹಿಸುತ್ತಿದೆ. ಹಗರಣದ ವಿಚಾರಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಜ್ಯಪಾಲರನ್ನು ನಿಂದಿಸುವ ಕೆಲಸ ರಾಜ್ಯ ಸರ್ಕಾರ ಮಾಡಿದೆ. ಇದರ ನಡುವೆ ಹೈಕೋರ್ಟ್ನಲ್ಲಿ ತೀರ್ಪು ಬರುವ ಮುನ್ನವೇ ಲೋಕಾಯುಕ್ತ ವರದಿ ನೀಡಿದೆ. ಮುಖ್ಯಮಂತ್ರಿ ಒತ್ತಡಕ್ಕೆ ಮಣಿದು ಕ್ಲೀನ್ ಚಿಟ್ ಕೊಡುವ ಕೆಲಸ ಆಗಿದೆ ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯ. ಮಾಧ್ಯಮಗಳ ವರದಿ ಸತ್ಯವೇ ಆದರೆ ಇದರ ವಿರುದ್ಧವಾಗಿ ನಾವು ಹೋರಾಟ ಮಾಡುತ್ತೇವೆ. ತನಿಖೆ ನಡೆಯುವಾಗ ಆಧಾರ ರಹಿತ ವರದಿ ನೀಡಲು ಸಾಧ್ಯವಿಲ್ಲ, ಆತುರ ಆತುರವಾಗಿ ಕ್ಲೀನ್ ಚೀಟ್ ಪಡೆಯುವ ಕೆಲಸ ಸಿಎಂ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಗೊಂದಲ ವಿಚಾರ : ರಾಜ್ಯಾಧ್ಯಕ್ಷರ ವಿಚಾರವಾಗಿ ಐದಾರು ಪ್ರಮುಖರು ನನ್ನ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಮೊನ್ನೆ ನಡೆದ ಸಭೆಯಲ್ಲಿ ಶೇ 80 ರಿಂದ 90ರಷ್ಟು ಬಹುತೇಕರು ರಾಜ್ಯಾಧ್ಯಕ್ಷರು ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಮ್ಮೆ ಬಿ. ವೈ ವಿಜಯೇಂದ್ರ ಅವರನ್ನೇ ಮುಂದುವರೆಸಿ ಅಂದಿದ್ದಾರೆ. ಅಸಮಾಧಾನ ಇರೋದು ಕೆಲವರಿಗೆ ಮಾತ್ರ ಎಂದರು. ಎಲ್ಲಾ ಗೊಂದಲಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಪಕ್ಷದ ಬೆಳವಣಿಗೆಗಳು ನನಗೂ ಬೇಸರ ತರಿಸಿವೆ. ಈ ವಿಚಾರ ಸಂತೋಷ ತಂದಿಲ್ಲ, ಕಾರ್ಯಕರ್ತರಿಗೂ ಬೇಸರ ಇದೆ ಎಂದರು.
ನನ್ನ ಅಧ್ಯಕ್ಷಗಿರಿಯ ಬಗ್ಗೆ ಕಾರ್ಯಕರ್ತರಿಗೂ ಸಮಾಧಾನ ಇದೆ. ಬಣ ಬೆಳವಣಿಗೆಗಳ ಬಗ್ಗೆ ಕಾರ್ಯಕರ್ತರಿಗೆ ಅಸಮಾಧಾನ ಇದೆ. ಎಲ್ಲಾ ವಿಚಾರಗಳು ಸರಿ ಆಗಬೇಕಿದೆ. ಇದರ ಬಗ್ಗೆ ಕೇಂದ್ರ ನಾಯಕತ್ವ ಗಮನ ಹರಿಸಬೇಕಿದೆ ಎಂದರು. ಯಡಿಯೂರಪ್ಪ ಅವರ ಬಗ್ಗೆ ಅಪಮಾನ ಆಗುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರು ಸಹ ನೊಂದಿದ್ದಾರೆ. ಈ ವಿಚಾರವಾಗಿ ನಾನು ಹೈಕಮಾಂಡ್ ಜೊತೆ ಮಾತಾಡಿದ್ದೇನೆ ಎಂದು ಹೇಳಿದರು.
ಶ್ರೀರಾಮುಲು ಅಸಮಾಧಾನ ಚರ್ಚೆ ವಿಚಾರ : ಶ್ರೀರಾಮುಲು ವಿಚಾರ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಿದೆ. ಶ್ರೀರಾಮುಲು ಬಗ್ಗೆ ನನಗೆ ಗೌರವ ಇದೆ. ಎಲ್ಲರೂ ಒಟ್ಟಾಗಬೇಕು ಅಂತಾ ರಾಧಾ ಮೋಹನ್ ದಾಸ್ ತಿಳಿಸಿದ್ದಾರೆ ಎಂದರು.
ರಾಜ್ಯದಲ್ಲಿ ಬಹುಮತದೊಂದಿಗೆ ಪಕ್ಷ ಅಧಿಕಾರಕ್ಕೆ ತರಲು ಚರ್ಚೆ ಆಗಿದೆ. ಎಲ್ಲಾ ಅಂಶಗಳನ್ನು ಹೊರಗಡೆ ಹೇಳಲ್ಲ.
ಶ್ರೀರಾಮುಲುಗೆ ವಿನಂತಿ ಮಾಡುತ್ತೇನೆ, ಅಪಾರ್ಥಕ್ಕೆ ಅವಕಾಶ ಮಾಡಿಕೊಡಬಾರದು. ಎಲ್ಲರೂ ಒಟ್ಟಾಗಿ ಹೋಗಬೇಕಿದೆ ಎಂದರು.
ಇದನ್ನೂ ಓದಿ : ಟಾರ್ಗೆಟ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಇದೆಲ್ಲದಕ್ಕೂ ಹೈಕಮಾಂಡ್ನಿಂದ ಶೀಘ್ರದಲ್ಲೇ ಇತಿಶ್ರೀ: ವಿಜಯೇಂದ್ರ - B Y VIJAYENDRA