ಕರ್ನಾಟಕ

karnataka

ETV Bharat / bharat

ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಉಮೇದುವಾರಿಕೆ ಸಲ್ಲಿಕೆ; ₹20 ಕೋಟಿ ಆಸ್ತಿ ಘೋಷಣೆ - Rahul Gandhi Nomination - RAHUL GANDHI NOMINATION

ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ, ಅಮೇಥಿ ಕ್ಷೇತ್ರದಿಂದ ಕಿಶೋರಿ ಲಾಲ್ ಶರ್ಮಾ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೊಂದೆಡೆ, ಅಮೇಥಿ ಬದಲು ರಾಯ್ ಬರೇಲಿಯಲ್ಲಿ ರಾಹುಲ್ ಸ್ಪರ್ಧೆ ಕುರಿತಂತೆ ಬಿಜೆಪಿ ವ್ಯಂಗ್ಯವಾಡಿದೆ.

Rahul Gandhi files nomination
ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ (IANS)

By PTI

Published : May 3, 2024, 10:03 PM IST

ನವದೆಹಲಿ/ರಾಯ್ ಬರೇಲಿ:ಉತ್ತರ ಪ್ರದೇಶದ ಪ್ರತಿಷ್ಠಿತ ಅಮೇಥಿ ಮತ್ತು ರಾಯ್ ಬರೇಲಿ ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತ ಕುತೂಹಲಕ್ಕೆ ಕಾಂಗ್ರೆಸ್​ ಶುಕ್ರವಾರ ಬೆಳಗ್ಗೆ ತೆರೆ ಎಳೆದಿದೆ. ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿಯಲ್ಲಿ ಪುತ್ರ ರಾಹುಲ್ ಗಾಂಧಿ ಹಾಗೂ ಅಮೇಥಿಯಲ್ಲಿ ಗಾಂಧಿ ಕುಟುಂಬದ ನಿಕಟವರ್ತಿ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಕೆಲವೇ ಒಂದು ಗಂಟೆ ಬಾಕಿರುವಾಗ ಇಬ್ಬರೂ ತಮ್ಮ ಉಮೇದುವಾರಿಕೆಯನ್ನೂ ಸಲ್ಲಿಸಿದರು.

ಅಮೇಥಿ ಹಾಗೂ ರಾಯ್ ಬರೇಲಿ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಮೇ 20ರಂದು ಮತದಾನ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಅಮೇಥಿಯಲ್ಲಿ ಸೋತಿದ್ದರು. ಮತ್ತೊಂದೆಡೆ, ನಾಲ್ಕು ಬಾರಿ ರಾಯ್ ಬರೇಲಿಯಿಂದ ಆಯ್ಕೆಯಾಗಿದ್ದ ಸೋನಿಯಾ ಗಾಂಧಿ ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದ್ದರಿಂದ ಈ ಚುನಾವಣೆಗೆ ಎರಡೂ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಬಗ್ಗೆ ಕಾಂಗ್ರೆಸ್​ ಕೊನೆಯವರೆಗೂ ಕುತೂಹಲವನ್ನು ಕಾಯ್ದಿರಿಸಿತ್ತು. ಬೆಳಗ್ಗೆ ಅಧಿಕೃತವಾಗಿ ರಾಹುಲ್​, ಕಿಶೋರಿ ಲಾಲ್ ಹೆಸರನ್ನು ಪ್ರಕಟಿಸಿತು.

ಇಬ್ಬರು ಅಭ್ಯರ್ಥಿಗಳು ದೆಹಲಿಯಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರೊಂದಿಗೆ ಅಮೇಥಿಯ ಫುರ್ಸತ್‌ಗಂಜ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಗಾಂಧಿ ಕುಟುಂಬದ ನಿಕಟವರ್ತಿಯಾದ ಶರ್ಮಾ ಅಮೇಥಿ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಅಮೇಥಿಯಿಂದ ರಾಯ್ ಬರೇಲಿಗೆ ಖರ್ಗೆ, ಸೋನಿಯಾ ಮತ್ತು ಪ್ರಿಯಾಂಕಾ-ರಾಬರ್ಟ್ ವಾದ್ರಾ ದಂಪತಿಯೊಂದಿಗೆ ಬಂದ ರಾಹುಲ್​ ಗಾಂಧಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಿಲ್ಲಾ ಚುನಾವಣಾಧಿಕಾರಿ ಹರ್ಷಿತಾ ಮಾಥುರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗು ಅವರ ಕುಟುಂಬದ ಸದಸ್ಯರು ಕೂಡ ಸಾಥ್​ ನೀಡಿದರು. ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು 'ಇಂಡಿಯಾ' ಮೈತ್ರಿಕೂಟದ ಸಮಾಜವಾದಿ ಪಕ್ಷದ ಕಾರ್ಯಕರ್ತರು ಸಹ ಜಿಲ್ಲಾಧಿಕಾರಿ ಕಚೇರಿ ಬಳಿ ಪಕ್ಷಗಳು ಧ್ವಜ ಮತ್ತು ಬ್ಯಾನರ್‌ಗಳ ಹಿಡಿದು ಹೆಚ್ಚಿನ ಸಂಖ್ಯೆ ಜಮಾಯಿಸಿದ್ದರು.

ನಾಮಪತ್ರ ಬಳಿಕ ರಾಹುಲ್ ಗಾಂಧಿ ಮತ್ತು ಇತರ ಕುಟುಂಬ ಸದಸ್ಯರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ತೆರಳಿ ಪೂಜೆ ಸಲ್ಲಿಸಿದರು. ರಾಯ್ ಬರೇಲಿ ಕಾಂಗ್ರೆಸ್ ವಕ್ತಾರ ವಿನಯ್ ದ್ವಿವೇದಿ ಮಾತನಾಡಿ, "ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಸ್ಥಳೀಯರು ಈ ಕ್ಷೇತ್ರದಿಂದ ಗಾಂಧಿ ಕುಟುಂಬದವರೇ ಮಾತ್ರ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಒತ್ತಡ ಇತ್ತು. ಪಕ್ಷದ ನಾಯಕತ್ವವು ಅವರ ನಂಬಿಕೆಗೆ ತಕ್ಕಂತೆ ನಡೆದುಕೊಂಡಿದೆ" ಎಂದು ಹೇಳಿದರು.

ಕಾಂಗ್ರೆಸ್​ ಬಗ್ಗೆ ಬಿಜೆಪಿ ವ್ಯಂಗ್ಯ:ಮತ್ತೊಂಡದೆ, ಅಮೇಥಿ ಬದಲು ರಾಯ್ ಬರೇಲಿಯಲ್ಲಿ ರಾಹುಲ್​ ಗಾಂಧಿ ಸ್ಪರ್ಧೆ ಕುರಿತಂತೆ ಬಿಜೆಪಿ ಲೇವಡಿ ಮಾಡಿದೆ. ಭಾಗ್ ರಾಹುಲ್ ಭಾಗ್, ರಾಹುಲ್ ಭಾಗ್, ರಾಹುಲ್ ಭಾಗ್ (ಓಡು ರಾಹುಲ್ ಓಡು). ಇದು ಈಗ ಮುಂದುವರಿದಿದೆ ಎಂದು ದೆಹಲಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ವ್ಯಂಗ್ಯ ಮಾಡಿದರೆ, ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವನಾ ಪ್ರಚಾರದಲ್ಲಿ ಪ್ರಧಾನಿ ಮೋದಿ, ''ಡರೋ ಮತ್​, ಭಾಗೋ ಮತ್​' ಎನ್ನುವ ಮೂಲಕ ಲೇವಡಿ ಮಾಡಿದ್ದಾರೆ.

ಅಮೇಥಿಯಲ್ಲಿ ಬಿಜೆಪಿಯಿಂದಲೇ ಈಗಾಗಲೇ ಕೇಂದ್ರ ಸಚಿವೆ, ಹಾಲಿ ಸಂಸದೆ ಸ್ಮೃತಿ ಇರಾನಿ ನಾಮಪತ್ರ ಸಲ್ಲಿಸಿದ್ದಾರೆ. ರಾಯ್ ಬರೇಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ದಿನೇಶ್ ಪ್ರತಾಪ್ ಸಿಂಗ್ ಕಣಕ್ಕೆ ಇಳಿದಿದ್ದಾರೆ. 2019ರಲ್ಲಿ ಸೋನಿಯಾ ಗಾಂಧಿ ಎದುರು ಪ್ರತಾಪ್ ಸಿಂಗ್ ಸೋತಿದ್ದರು. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಪ್ರತಾಪ್​ 2018ರಲ್ಲಿ ಪಕ್ಷ ತೊರೆದಿದ್ದರು.

ರಾಹುಲ್​ ಆಸ್ತಿ ₹20 ಕೋಟಿ:ರಾಹುಲ್​ ಗಾಂಧಿ ತಮ್ಮ ಬಳಿ 20 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಇರುವುದಾಗಿ ನಾಮಪತ್ರದಲ್ಲಿ ಘೋಷಿಸಿದ್ದಾರೆ. 3,81,33,572 ರೂ. ಮೌಲ್ಯದ ಷೇರುಗಳು, 26,25,157 ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಮತ್ತು 15,21,740 ರೂಪಾಯಿಗಳ ಚಿನ್ನದ ಬಾಂಡ್‌ಗಳು ಸೇರಿದಂತೆ 9,24,59,264 ರೂಪಾಯಿಗಳ ಚರಾಸ್ತಿ ಇದೆ. ಜೊತೆಗೆ 11,15,02,598 ರೂ. ಮೌಲ್ಯದ ಸ್ಥಿರಾಸ್ತಿ ಘೋಷಿಸಿದ್ದು, ಇವುಗಳಲ್ಲಿ ಪ್ರಸ್ತುತ 9,04,89,000 ಮೌಲ್ಯದ ಸ್ವಯಂ ಆಸ್ತಿಗಳು ಮತ್ತು 2,10,13,598 ಮೌಲ್ಯದ ಪಿತ್ರಾರ್ಜಿತ ಆಸ್ತಿ ಸೇರಿವೆ. ತಮ್ಮ ಕೈಯಲ್ಲಿ 55,000 ರೂಪಾಯಿ ನಗದು ಮತ್ತು 49,79,184 ರೂಪಾಯಿ ಸಾಲ ಇದೆ. 2022-23ರ ಹಣಕಾಸು ವರ್ಷದ ಪ್ರಕಾರ ವಾರ್ಷಿಕ ಆದಾಯ 1,02,78,680 ರೂ. ಇದೆ ಎಂದು ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:'ಡರೋ ಮತ್, ಭಾಗೋ ಮತ್': ಅಮೇಠಿ ಬದಲು ರಾಯ್ ಬರೇಲಿಯಲ್ಲಿ ರಾಹುಲ್​ ಸ್ಪರ್ಧೆಗೆ ಮೋದಿ ಲೇವಡಿ

ABOUT THE AUTHOR

...view details