ಬೆಂಗಳೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡುವ ಕಸರತ್ತು ನಡೆಸುವ ಮಧ್ಯೆಯೇ ಇತ್ತ ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರ ಮೇಲೆ 10 ವರ್ಷ ಶಿಕ್ಷೆ ವಿಧಿಸುವ ಕಠಿಣ ಕಾನೂನಿನ ತಿದ್ದುಪಡಿಗೆ ಸಹಕಾರ ಇಲಾಖೆಯೂ ಸಿದ್ಧತೆ ನಡೆಸಿದೆ.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಲೇವಾದೇವಿಗಾರರ ವಿರುದ್ಧ ನಿಯಂತ್ರಣ ಹೇರಲು ಇರುವ ಕಾನೂನನ್ನೇ ಪ್ರಯೋಗ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸುಗ್ರೀವಾಜ್ಞೆ ತರುವ ಅಗತ್ಯತೆಯನ್ನು ಅವರು ಪ್ರಶ್ನಿಸಿದ್ದಾರೆ. ಇರುವ ಕಾನೂನನ್ನೇ ಇನ್ನಷ್ಟು ಕಠಿಣಗೊಳಿಸಿದರೆ ಅನಧಿಕೃತ ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರ ಕಿರುಕುಳಕ್ಕೆ ಅಂಕುಶ ಹಾಕಬಹುದಾಗಿದೆ ಎಂಬುದು ಅವರ ವಾದವಾಗಿದೆ. ಈ ನಿಟ್ಟಿನಲ್ಲಿ ಅವರು ತಮ್ಮ ಸಹಕಾರ ಇಲಾಖೆಯ ವ್ಯಾಪ್ತಿಗೆ ಬರುವ ಕಾಯ್ದೆಯನ್ನೇ ಇನ್ನಷ್ಟು ಬಲಪಡಿಸಲು ತಯಾರಿ ನಡೆಸಿದ್ದಾರೆ.
ಮಿತಿಮೀರಿ ಬಡ್ಡಿ ವಿಧಿಸಿದರೆ 10 ವರ್ಷ ಕಠಿಣ ಸಜೆ: ರಾಜ್ಯದಲ್ಲಿ ಇನ್ನು ಮುಂದೆ ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರು, ಪಾನ್ ಬ್ರೋಕರ್ಸ್, ಯಾವುದೇ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ತಿದ್ದುಪಡಿ ತರಲು ಸಹಕಾರ ಇಲಾಖೆ ಮುಂದಾಗಿದೆ. ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರು, ಪಾನ್ ಬ್ರೋಕರ್ಸ್ ಸೇರಿ ಇತರ ಸಹಕಾರ ಸಂಘಗಳ ಮೇಲೆ ನಿಯಂತ್ರಣ ಹೇರಲು ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ-2004 ಕಾಯ್ದೆ ಜಾರಿಯಲ್ಲಿದೆ. ಇದರಡಿ ಮಿತಿಮೀರಿ ಬಡ್ಡಿ ವಿಧಿಸುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ.
ಈಗಿರುವ ಗರಿಷ್ಠ 3 ವರ್ಷ ಶಿಕ್ಷೆ ಪ್ರಮಾಣವನ್ನು ತಿದ್ದುಪಡಿ ತಂದು ಗರಿಷ್ಠ 10 ವರ್ಷಗಳವರೆಗೆ ಹೆಚ್ಚಿಸಲು ಸಿದ್ಧತೆ ನಡೆಸಲಾಗುತ್ತಿದೆ. ಜೊತೆಗೆ ಒಂದು ಲಕ್ಷಕ್ಕೂ ಅಧಿಕ ದಂಡ ವಿಧಿಸುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದೆ. ಈ ಸಂಬಂಧ ಸಹಕಾರ ಸಚಿವ ಕೆ.ಎನ್.ರಾಜಣ್ಣ ಈಗಾಗಲೇ ಸಹಕಾರ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪೂರಕ ತಿದ್ದುಪಡಿ ತರಲು ಸಮಾಲೋಚನೆ ನಡೆಸಿದ್ದಾರೆ.
ಮುಂಬರುವ ಅಧಿವೇಶನದಲ್ಲಿ ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ಮಸೂದೆ ಮಂಡನೆ ಮಾಡಲು ಮುಂದಾಗಿದೆ. ಆ ಮೂಲಕ ಅಧಿಕ ಬಡ್ಡಿ ವಿಧಿಸುವವರ ಮೇಲೆ ಕಠಿಣ ಕಾನೂನು ಜಾರಿ ಮಾಡಲು ಸಹಕಾರ ಇಲಾಖೆ ತೀರ್ಮಾನಿಸಿದೆ.
ಹಾಲಿ ಕಾಯ್ದೆಯಲ್ಲಿರುವ ಅಂಶಗಳೇನು?: ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ- 2004 ಮೂಲಕ ಅತಿಹೆಚ್ಚು ಬಡ್ಡಿ ವಿಧಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದರೂ ನಿರೀಕ್ಷಿತ ಕಡಿವಾಣ ಬಿದ್ದಿಲ್ಲ. ಅದಕ್ಕಾಗಿ ಇರುವ ಕಾಯ್ದೆಯಲ್ಲಿನ ಕಾನೂನಿಗೆ ಇನ್ನಷ್ಟು ಶಕ್ತಿ ತುಂಬಲು ಸಹಕಾರ ಇಲಾಖೆ ಚಿಂತನೆ ನಡೆಸಿದೆ.
ಹಾಲಿ ಇರುವ ಕಾಯ್ದೆ ಪ್ರಕಾರ ಸಾಲದ ಮೇಲೆ ಮಿತಿಮೀರಿ ಬಡ್ಡಿ ವಿಧಿಸುವುದಕ್ಕೆ ಕಡಿವಾಣ ಮತ್ತು ಲೇವಾದೇವಿದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅನುವು ಮಾಡುತ್ತದೆ. ಜೊತೆಗೆ ಸಾಲ ವಸೂಲಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಂಶಗಳನ್ನು ಹೊಂದಿದೆ. ಜೊತೆಗೆ ಸಾಲಗಾರ ಯಾವ ವ್ಯಕ್ತಿಯಿಂದ ತಾನು ಸ್ವೀಕರಿಸಿದ ಸಾಲದ ಸಂಬಂಧದಲ್ಲಿ ಬಾಕಿ ಇರುವ ಹಣವನ್ನು, ಕರ್ನಾಟಕ ಲೇವಾದೇವಿಗಾರರ ಅಧಿನಿಯಮ,1961 ಅಡಿಯಲ್ಲಿ ರಾಜ್ಯ ಸರ್ಕಾರ ನಿಗದಿ ಮಾಡಿದ ದರದಲ್ಲಿ ಬಡ್ಡಿಯೊಡನೆ ಅಧಿಕಾರ ವ್ಯಾಪ್ತಿಯನ್ನುಳ್ಳ ನ್ಯಾಯಾಲಯದಲ್ಲಿ ಹಣವನ್ನು, ಪೂರ್ಣವಾಗಿ ಅಥವಾ ಸಂದರ್ಭಾನುಸಾರ ಭಾಗಶಃ ಸಾಲದ ತೀರಿಕೆಗಾಗಿ, ಸಾಲ ಮತ್ತು ಬಡ್ಡಿ ಹಣವನ್ನು ಠೇವಣಿ ಇಡಲಾಗಿದೆ ಎಂಬುದನ್ನು ದಾಖಲಿಸುವ ಅರ್ಜಿ ಸಹಿತ, ಠೇವಣಿ ಇಡಬಹುದಾಗಿದೆ.
ಈ ಅರ್ಜಿಯನ್ನು ಸ್ವೀಕರಿಸಿದ ಮೇಲೆ ಅರ್ಜಿಯಲ್ಲಿ ನಮೂದಿಸಿದ ವ್ಯಕ್ತಿಗೆ, ನ್ಯಾಯಾಲಯ ನೀಡಬಹುದಾದಂತೆ, 15 ದಿನಗಳ ಅವಧಿಯ ಒಳಗೆ ತನ್ನ ಉತ್ತರಗಳನ್ನು ನೀಡುವಂತೆ ನಿರ್ದೇಶಿಸುತ್ತದೆ. ನ್ಯಾಯಾಲಯ ವಿಚಾರಣೆಯ ತರುವಾಯ ಮತ್ತು ಉಭಯ ಪಕ್ಷಗಳ ಹೇಳಿಕೆಗಳನ್ನು ಪರಿಗಣಿಸಿದ ನಂತರ ಸಾಲ ಮತ್ತು ಅದರ ಬಡ್ಡಿಯು ಪೂರ್ಣವಾಗಿ ಅಥವಾ ಸಂದರ್ಭಾನುಸಾರ ಭಾಗಶಃ ತೀರಿಕೆಯಾಗಿದೆ ಎಂದು ದಾಖಲು ಮಾಡಿ ಆದೇಶ ಹೊರಡಿಸಬಹುದಾಗಿದೆ.
ಸಾಲ ಅಥವಾ ಅದರ ಬಡ್ಡಿಯ ಮರುಪಾವತಿಗಾಗಿ ಬಲವಂತವಾಗಿ ತೆಗೆದುಕೊಂಡ ಚರ ಅಥವಾ ಸ್ಥಿರ ಸ್ವತ್ತು ಯಾವುದಾದರೂ ಇದ್ದರೆ, ಅದರ ಸ್ವಾಧೀನತೆಯನ್ನು ಪುನಃ ಒಪ್ಪಿಸಲು ನ್ಯಾಯಾಲಯ ಆದೇಶ ಹೊರಡಿಸಬಹುದಾಗಿದೆ. ಇನ್ನು ರಾಜ್ಯ ಸರ್ಕಾರ ನಿಗದಿ ಮಾಡಿದ ದರದಲ್ಲಿ ಮಾತ್ರವೇ ಸಾಲದ ಮೇಲೆ ಬಡ್ಡಿ ವಿಧಿಸುವ ಬಗ್ಗೆ ನ್ಯಾಯಾಲಯದ ಮುಂದೆ ಪ್ರಕಟಿಸಬೇಕು.
ಬಡ್ಡಿಯೂ ಸೇರಿದಂತೆ ಸಾಲದ ಇತ್ಯರ್ಥಕ್ಕಾಗಿ ಸಾಲಗಾರನು ದಾಖಲು ಮಾಡಿದ ಅರ್ಜಿಗೆ ಸಂಬಂಧಿಸಿ ರಾಜ್ಯ ಸರ್ಕಾರ ನಿಗದಿಪಡಿಸಿದ ಬಡ್ಡಿಯ ದರಕ್ಕಿಂತ ಹೆಚ್ಚಿನ ದರವನ್ನು ಸಾಲಗಾರನು ಸಂದಾಯ ಮಾಡಿದ್ದಲ್ಲಿ ಆ ಬಡ್ಡಿಯನ್ನು ಹೊಂದಾಣಿಕೆ ಮಾಡುವಂತೆ ಆದೇಶ ಹೊರಡಿಸಬಹುದು. ಸಾಲಗಾರ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಂತಹ ಆತ್ಮಹತ್ಯೆಗೆ ನಿಕಟಪೂರ್ವದಲ್ಲಿ ಸಾಲಗಾರ ಅಥವಾ ಅವನ ಕುಟುಂಬದ ಯಾವೊಬ್ಬ ಸದಸ್ಯನನ್ನು ಸಾಲ ನೀಡಿದ ವ್ಯಕ್ತಿ ಪೀಡಿಸಿದ್ದನೆಂಬುದು ರುಜುವಾದರೆ, ಸಾಲ ನೀಡಿದ ವ್ಯಕ್ತಿಯೇ ಕಾರಣ ಎಂದು ಭಾವಿಸಲಾಗುತ್ತದೆ.
ಹಾಲಿ ಕಾಯ್ದೆಯಲ್ಲಿ ಕಾನೂನು ಉಲ್ಲಂಘಿಸುವ ಅಥವಾ ಯಾವುದೇ ಸಾಲದ ವಸೂಲಿಗಾಗಿ ಸಾಲಗಾರನನ್ನು ಪೀಡಿಸುವ ಅಥವಾ ಪೀಡಿಸುವುದಕ್ಕಾಗಿ ಪ್ರೇರೇಪಿಸಿದ ವ್ಯಕ್ತಿಗೆ, ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 30 ಸಾವಿರ ರೂ.ವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲಾಗುತ್ತಿದೆ.
ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ-2004ಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಈಗ ಗರಿಷ್ಠ 3 ವರ್ಷ ಶಿಕ್ಷೆ ವಿಧಿಸಬಹುದು. ಅದನ್ನು ಗರಿಷ್ಠ 10 ವರ್ಷಕ್ಕೆ ವಿಸ್ತರಿಸಲು ತಿದ್ದುಪಡಿ ತರಲು ಈಗಾಗಲೇ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಅಧಿಕಾರಿಗಳು ತಿದ್ದುಪಡಿ ಸಂಬಂಧ ಸಿದ್ಧತೆ ನಡೆಸುತ್ತಿದ್ದಾರೆ. ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ಯೋಚಿಸಿದ್ದೇವೆ - ಸಹಕಾರ ಸಚಿವ ಕೆ.ಎನ್.ರಾಜಣ್ಣ
ಇದನ್ನೂ ಓದಿ: ಸುಮ್ಮನೆ ರಾಜಕೀಯ ಸಂದೇಶ ರವಾನಿಸಲು ಸುಗ್ರೀವಾಜ್ಞೆ: ಸಚಿವ ಕೆ.ಎನ್.ರಾಜಣ್ಣ
ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾಗಬೇಡಿ, ಸರ್ಕಾರ ನಿಮ್ಮ ಜೊತೆಗಿದೆ: ಸಿಎಂ ಸಿದ್ದರಾಮಯ್ಯ