ಧಾರವಾಡ: ಸುದೀರ್ಘ ಹೋರಾಟದ ಫಲವಾಗಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ರಾಜ್ಯ ಸರ್ಕಾರ ಅಸ್ತು ಅಂದಿದೆ. ಇನ್ನೇನು ಕಾರ್ಯಾರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಹೊಸ ಪಾಲಿಕೆ ಸೇರಲು ಕೆಲ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್ಗಳನ್ನು ವಿಂಗಡಿಸಿ, 26 ವಾರ್ಡ್ ಧಾರವಾಡಕ್ಕೆ ನೀಡಿ ಪ್ರತ್ಯೇಕ ಪಾಲಿಕೆ ಘೋಷಿಸಲಾಗಿದೆ. ಈ ಕುರಿತು ಸರ್ಕಾರ ಇತ್ತೀಚೆಗೆ ಗೆಜೆಟ್ ನೋಟಿಪಿಕೇಷನ್ ಸಹ ಮಾಡಿದೆ. ಇದರ ನಡುವೆ ಧಾರವಾಡ ಸುತ್ತಮುತ್ತಲಿನ ಗ್ರಾಮಗಳನ್ನೂ ಹೊಸ ಪಾಲಿಕೆಗೆ ಸೇರಿಸಿ ಬಿಡುತ್ತಾರೆ ಎಂಬ ಗುಲ್ಲೆದ್ದಿದೆ. ಇದರಿಂದ ರೊಚ್ಚಿಗೆದ್ದಿರುವ ನರೇಂದ್ರ, ಮುಮ್ಮಿಗಟ್ಟಿ ಹಾಗೂ ಇತರೆ ಗ್ರಾಮಗಳ ಜನರು ಹೋರಾಟಕ್ಕೆ ಇಳಿದಿದ್ದಾರೆ.
ಚಕ್ಕಡಿ, ಟ್ರ್ಯಾಕ್ಟರ್ಗಳ ಮೂಲಕ ಪ್ರತಿಭಟನಾ ಮೆರವಣಿಗೆಯೊಂದಿಗೆ ಧಾರವಾಡಕ್ಕೆ ಬಂದು, ಜಿಲ್ಲಾಧಿಕಾರಿ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ತೆಗೆದುಕೊಳ್ಳಬೇಕೆಂದರೆ ಅಲ್ಲಿನ ರೈತರ ಸಂಖ್ಯೆ ಶೇ.50ಕ್ಕೂ ಕಡಿಮೆ ಇರಬೇಕು. ಆದರೆ ಈ ಗ್ರಾಮಗಳಲ್ಲಿ ಶೇ.90ರಷ್ಟು ರೈತರೇ ಇದಾರೆ. ಇಲ್ಲಿನ ಬಹುತೇಕ ಜಮೀನು ಕೃಷಿ ಆಧಾರಿತವಾಗಿದೆ. ಹೀಗಾಗಿ ನಿಯಮಗಳ ಪ್ರಕಾರ ನರೇಂದ್ರ ಗ್ರಾಮವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳಲು ಬರೋದಿಲ್ಲ ಅನ್ನೋದು ಗ್ರಾಮಸ್ಥರ ವಾದ.
ಒಂದು ವೇಳೆ ಈ ಉದ್ದೇಶಿತ ಪ್ರದೇಶಗಳು ಪಾಲಿಕೆ ವ್ಯಾಪ್ತಿಗೆ ಸೇರದೇ ಇದ್ದರೆ ತೆರಿಗೆ ಸಂಗ್ರಹವೇ ಹೊಸ ಪಾಲಿಕೆಗೆ ದೊಡ್ಡ ಪ್ರಶ್ನೆಯಾಗುತ್ತದೆ. ಹೀಗಾಗಿಯೇ ಸರ್ಕಾರಿ ಅಧಿಕಾರಿಗಳು ಅಕ್ಕಪಕ್ಕದ ಗ್ರಾಮಗಳನ್ನು ಸೇರಿಸಿಕೊಳ್ಳಲು ಪ್ಲ್ಯಾನ್ ಮಾಡಿರಬಹುದು. ಆದರೆ ಈ ನಿರ್ಧಾರಕ್ಕೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗುತ್ತಿದೆ. ನರೇಂದ್ರ ಮಾತ್ರವಲ್ಲ ಮನಸೂರ, ಮಮ್ಮಿಗಟ್ಟಿ ಭಾಗದ ಜನರು ಪಾಲಿಕೆಗೆ ಸೇರುತ್ತವೆ ಎಂಬ ಆತಂಕದಲ್ಲಿ ಆಕ್ಷೇಪ ಎತ್ತಿದ್ದಾರೆ.
![THE VILLAGERS OPPOSE THE FORMATION OF A SEPARATE CORPORATION FOR DHARWAD](https://etvbharatimages.akamaized.net/etvbharat/prod-images/02-02-2025/23456934_gsd.jpg)
ಹಲವು ದಶಕಗಳ ಹೋರಾಟದ ಫಲವಾಗಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಸಿಕ್ಕಿದೆ. ಆದರೆ ಆರಂಭದಲ್ಲಿಯೇ ವಿಘ್ನ ಎದುರಾಗುತ್ತಿದ್ದು, ಸರ್ಕಾರ ಮುಂದೇನು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಾಜ್ಯದ ಅತೀ ದೊಡ್ಡ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಉದಯ: ಇದರ ವಿಶೇಷತೆ ಹೀಗಿದೆ