ತಂಜಾವೂರು(ತಮಿಳುನಾಡು): ಸರ್ಕಾರಿ ಕಾಲೇಜಿನ ಶೌಚಾಲಯದಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿ, ಬಳಿಕ ನವಜಾತ ಶಿಶುವನ್ನು ಕಸದ ಬುಟ್ಟಿಯಲ್ಲಿ ಬಚ್ಚಿಟ್ಟ ಆಘಾತಕಾರಿ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?: ಶೌಚಾಲಯದಲ್ಲಿ ಹೆರಿಗೆ ಬಳಿಕ ನವಜಾತ ಶಿಶುವನ್ನು ಯಾರಿಗೂ ಗೊತ್ತಾಗದಂತೆ ಕಸದ ಬುಟ್ಟಿಯಲ್ಲಿ ಮುಚ್ಚಿಟ್ಟು ಮರಳಿ ಕ್ಲಾಸ್ರೂಂಗೆ ತೆರಳಿದ್ದಳು. ಕೆಲ ನಿಮಿಷಗಳ ನಂತರ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿನಿ ಅಸ್ವಸ್ಥಳಾಗಿ ಬಿದ್ದಿದ್ದು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿಯನ್ನು ವೈದ್ಯರು ಪರಿಶೀಲಿಸಿದಾಗ, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಗೊತ್ತಾಗಿದೆ. ತಕ್ಷಣವೇ ಶಾಲೆಯ ಶೌಚಾಲಯದ ಕಸದ ಬುಟ್ಟಿಯಲ್ಲಿದ್ದ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಬ್ಬರಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮನೆಯಲ್ಲಿ ವಿದ್ಯಾರ್ಥಿನಿ ಮತ್ತು ಅವರ ತಾಯಿ ಮಾತ್ರ ವಾಸವಾಗಿದ್ದಾರೆ. ತಂದೆ ಬೇರೆ ಕಡೆ ಕೆಲಸ ಮಾಡುತ್ತಿದ್ದು, ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಈ ಮಧ್ಯೆ ತನ್ನ ಸಂಬಂಧಿ ಯುವಕನ ಜೊತೆ ವಿದ್ಯಾರ್ಥಿನಿಗೆ ಪ್ರೇಮಾಂಕುರವಾಗಿತ್ತು. ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದರಿಂದ ಯುವತಿ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಗೆ ಒಪ್ಪಿದ ಯುವಕ: ಯುವತಿ ಜೊತೆಗಿನ ಸಂಬಂಧ ಒಪ್ಪಿಕೊಂಡ ಯುವಕ, ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ. ಸದ್ಯ ದೂರದ ಸ್ಥಳದಲ್ಲಿದ್ದು, ಎರಡು ದಿನಗಳಲ್ಲಿ ಬರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ದೂರು ನೀಡಲು ವಿದ್ಯಾರ್ಥಿನಿ ನಿರಾಕರಿಸಿದ್ದರಿಂದ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಯುವತಿಯ ಗೆಳೆಯ ಬಂದ ಬಳಿಕ ಹೇಳಿಕೆಯನ್ನು ಬರಹದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ಬಂದ ಬಳಿಕ ಕುಟುಂಬಸ್ಥರ ಜೊತೆ ಚರ್ಚಿಸಿ ಮದುವೆ ಮಾಡಲಾಗುತ್ತದೆ ಅಥವಾ ಪೊಲೀಸ್ ಠಾಣೆಯಲ್ಲೇ ಮದುವೆಯಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹೆರಿಗೆ ನಂತರ ಆತಂಕ, ಖಿನ್ನತೆಗೆ ಒಳಗಾಗಿದ್ದೀರಾ? ನಿರ್ಲಕ್ಷಿಸಿದರೆ ತಾಯಿ & ಮಗುವಿಗೆ ಅಪಾಯ!: ವೈದ್ಯರು ಹೇಳೋದೇನು?