ಶಿವಮೊಗ್ಗ: ಪ್ರತೀ ವರ್ಷ ರಸ್ತೆ ಅಪಘಾತದಲ್ಲಿ ಲಕ್ಷಾಂತರ ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಇದರಿಂದ ಅನೇಕ ಕುಟುಂಬಗಳು ಅನಾಥವಾಗುತ್ತಿವೆ. ಇಂತಹ ಅಪಘಾತಕ್ಕೆ ಕಾರಣಗಳನ್ನು ಮನಮುಟ್ಟುವಂತೆ ತಿಳಿಸುವ ಮೂಲಕ ಶಿವಮೊಗ್ಗದ ಸಂಚಾರಿ ಪೊಲೀಸರು ಶನಿವಾರ ವಿನೂತನವಾಗಿ ಜಾಗೃತಿ ಮೂಡಿಸಿದ್ದಾರೆ.
ಕೋಟೆ ಪೊಲೀಸ್ ಠಾಣೆ ರಸ್ತೆಯಲ್ಲಿರುವ ಪೊಲೀಸ್ ವಸತಿಗೃಹದ ಆವರಣದಲ್ಲಿ ರಸ್ತೆ ಸುರಕ್ಷತೆ ಹೇಗೆ ಮಾಡಬೇಕು, ಸಂಚಾರಿ ನಿಯಮಗಳೇನು, ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದರೆ ಹೇಗೆ ದಂಡ ಬೀಳುತ್ತದೆ, ಅಪಘಾತದಿಂದ ಜೀವ ಹಾನಿ ಹೇಗಾಗುತ್ತದೆ, ವಾಹನಗಳ ಕರ್ಕಶ ಶಬ್ದ ಹೇಗೆ ತೊಂದರೆ ಉಂಟು ಮಾಡುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಮಾಡಲ್ಗಳ ಮೂಲಕ ಪೊಲೀಸರು ಪ್ರದರ್ಶಿಸಿದರು.
ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಕ್ಕೆ ನಿಮ್ಮನ್ನು ವೆಲ್‌ಕಂ ಮಾಡುವುದು ರಸ್ತೆ ನಿಯಮಗಳೇ. ಜೀಬ್ರಾ ಕ್ರಾಸ್ ಅಂದರೆ ಏನು, ರಸ್ತೆಯಲ್ಲಿ ಸಂಚಾರ ಮಾಡುವಾಗ ಪಾಲಿಸಬೇಕಾದ ನಿಯಮಗಳು ಯಾವುವು, ಯಾವ ಚಿಹ್ನೆ ಬಳಸಬೇಕು, ರಸ್ತೆ ಪಕ್ಕದಲ್ಲಿ ಯಾವ ಚಿಹ್ನೆ ಇದ್ದರೆ ವಾಹನವನ್ನು ಹೇಗೆ ಓಡಿಸಬೇಕು, ಅಪಘಾತ ನಡೆದಾಗ ಅದರ ತೀವ್ರತೆ ಹೇಗಿರುತ್ತದೆ ಎಂಬುದನ್ನು ಮಾಡಲ್ ಮೂಲಕ ತಿಳಿಸಲಾಗಿದೆ. ಇದರ ಜೊತೆಗೆ ಸಿಇಎನ್ ಪೊಲೀಸರು, ಸೈಬರ್ ಅಪರಾಧದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಸಪ್ತಾಹಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಫೀಡ್ಬ್ಯಾಕ್ ಪಡೆಯಲಾಗಿದೆ.
ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಎಸ್ಪಿ ಮಿಥುನ್ ಕುಮಾರ್ ಉದ್ಘಾಟಿಸಿದರು. "ಅಪಘಾತ ಪ್ರಕರಣಗಳು ಅಧಿಕವಾಗುತ್ತಿದೆ. ರಸ್ತೆಗಳು ಉತ್ತಮವಾಗಿರುವುದರಿಂದ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಅಪಘಾತದಲ್ಲಿ ಯುವಕರೇ ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವರ್ಷಕ್ಕೆ 363 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು" ಎಂದು ಅವರು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಂದ ವೀಕ್ಷಣೆ: ಜಾಗೃತಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದು ರಸ್ತೆ ಅಪಘಾತ, ಸಂಚಾರ ನಿಯಮಗಳ ಮಾಡಲ್ಗಳನ್ನು ವೀಕ್ಷಿಸಿ ಅನುಭವ ಹಂಚಿಕೊಂಡರು.
ರಾಷ್ಟ್ರೀಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಚಿಂತನಾ ಮಾತನಾಡಿ, "ನಮ್ಮ ಶಾಲೆಯಿಂದ ಇಂದು ಒಳ್ಳೆಯ ಕಡೆ ಕರೆದುಕೊಂಡು ಬಂದಿದ್ದಾರೆ. ಟ್ರಾಫಿಕ್ ಸಿಗ್ನಲ್, ಟ್ರಾಫಿಕ್ ಸೇಫ್ಟಿ ಹೇಗಿರಬೇಕು ಮತ್ತು ಹೆಲ್ಮೆಟ್ ಯಾಕೆ ಹಾಕಿಕೊಳ್ಳಬೇಕು ತಿಳಿದುಕೊಂಡೆವು. ಜೊತೆಗೆ ಸೈಬರ್ ಕ್ರೈಂ ಬಗ್ಗೆಯೂ ತಿಳಿದುಕೊಂಡೆವು. ಅಪಫಾತದ ಮಾಡಲ್ ನೋಡಿ ನಿಜಕ್ಕೂ ಬೇಜಾರಾಯಿತು. ಅಪಘಾತದಿಂದ ನಮ್ಮನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿಕೊಟ್ಟ ಪೊಲೀಸ್ ಇಲಾಖೆಗೆ ಧನ್ಯವಾದ" ಎಂದು ತಿಳಿಸಿದರು.
ವಿದ್ಯಾಭಾರತಿ ಶಾಲೆಯ ವಿದ್ಯಾರ್ಥಿನಿ ವಿಘ್ನತ್ರಿ ಮಾತನಾಡಿ, "ಒಂದು ಅದ್ಭುತ ಸಲಹೆ ನಮಗಿಲ್ಲಿ ಸಿಕ್ಕಿದೆ. ನಾವೆಲ್ಲಾ ಹೇಗೆ ರಸ್ತೆ ನಿಯಮವನ್ನು ಉಲ್ಲಂಘಿಸುತ್ತಿದ್ದೇವೆ ಎಂದು ಇಲ್ಲಿಗೆ ಬಂದ ಮೇಲೆಯೇ ತಿಳಿಯಿತು. ನಮ್ಮ ಸುರಕ್ಷತೆಗೆ ಇರುವ ನಿಯಮಗಳನ್ನು ಪಾಲನೆ ಮಾಡಿದರೆ ನಮ್ಮ ಜೀವ ಹೇಗೆ ಸೇಫ್ ಆಗುತ್ತದೆ ಎಂಬುದು ಗೊತ್ತಾಯಿತು. ಪೊಲೀಸ್ ಕೆಲಸ ಹೇಗಿದೆ, ಕುಡಿದು ವಾಹನ ಚಾಲನೆ ಮಾಡಿದರೆ ಹಾಗೂ ಮೊಬೈಲ್ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡಿದರೆ ಹೇಗಾಗುತ್ತದೆ ಎಂದೆಲ್ಲ ತಿಳಿದುಕೊಂಡೆವು" ಎಂದರು.
ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್; 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ