ನವದೆಹಲಿ: ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆ ಬಳಿಕ ಖಾತರಿಗಳ ಮೇಲೆ ಬಲವಾದ ನಂಬಿಕೆ ಇಟ್ಟುಕೊಂಡಿರುವ ಕಾಂಗ್ರೆಸ್, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನೂತನ ಅಭಿಯಾನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಘರ್ ಘರ್ ಗ್ಯಾರಂಟಿ (ಮನೆ ಮನೆಗೆ ಗ್ಯಾರಂಟಿ) ಎಂಬ ನೂತನ ಅಭಿಯಾನಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಂಚ್ ನ್ಯಾಯ್ ಪಚ್ಚೀಸ್ ಗ್ಯಾರಂಟಿ (5 ನ್ಯಾಯ 25 ಗ್ಯಾರಂಟಿ) ಘೋಷಣೆಯಡಿ ನೀಡಿದ ಎಲ್ಲ ಭರವಸೆಯನ್ನು ದೇಶದ ಎಲ್ಲ ಮನೆ ಮನೆಗೂ ಮುಟ್ಟಿಸಲು ಪಕ್ಷದ ಸದಸ್ಯರೆಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.
ಏಪ್ರಿಲ್ 3 ರಂದು ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ, ನಂತರ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಮನೆ ಮನೆಗೆ ತೆರಳಿ ಕಲ್ಪೆಟ್ಟಾ ಪ್ರದೇಶದ ಮರವಯಲ್ ಕಾಲೋನಿಯಲ್ಲಿ ಮತದಾರರಿಗೆ ಕಾಂಗ್ರೆಸ್ ಖಾತರಿ ಕಾರ್ಡ್‌ಗಳನ್ನು ವಿತರಿಸಿದರು. ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಹಾಗೂ ಸಮಾನತೆ ನ್ಯಾಯ ಎಂಬ ಐದು ನ್ಯಾಯಗಳ ಘೋಷಣೆ ಸಹಿತ 25 ಗ್ಯಾರಂಟಿಗಳ ಭರವಸೆಗಳನ್ನು ಕಾಂಗ್ರೆಸ್ ನೀಡಿದೆ. ಯುವಕರು, ಮಹಿಳೆಯರು, ರೈತರು, ಅಸಂಘಟಿತ ಕಾರ್ಮಿಕರು ಮತ್ತು ಹಿಂದುಳಿದ ಸಮುದಾಯಗಳಿಗೆ ಸಂಬಂಧಿಸಿದ ಸಾಮಾಜಿಕ ನ್ಯಾಯದ 5 ಆಧಾರ ಸ್ತಂಭಗಳನ್ನು ವಿವರಿಸುವ ಕಾರ್ಡ್‌ಗಳಲ್ಲಿ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಸಹಿ ಇದೆ. ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕೈಥವಾಡದ ಉಸ್ಮಾನ್‌ಪುರದಿಂದ ಈ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ದೇಶದಾದ್ಯಂತ 8 ಕೋಟಿ ಮನೆಗಳಿಗೆ ತಲುಪಿ ಗ್ಯಾರಂಟಿ ಬಗ್ಗೆ ಅರಿವು ಮೂಡಿಸುವ ಗುರಿ ಸಹ ಹೊಂದಿದೆ.
ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ''ನಮ್ಮ 'ಪಂಚ ನ್ಯಾಯ ಪಚ್ಚೀಸ್ ಗ್ಯಾರಂಟಿ' ಅನ್ನು ಜನರಿಗೆ ತಲುಪಿಸಲು ಈ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದ್ದೇವೆ. ದೇಶದಾದ್ಯಂತ 8 ಕೋಟಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವ ಯೋಜನೆ ಹೊಂದಿದ್ದೇವೆ. ನಾವು ನೀಡಿದ ಭರವಸೆಗಳನ್ನೆಲ್ಲ ಈಡೇರಿಸಲಿದ್ದೇವೆ'' ಎಂದು ತಿಳಿಸಿದರು.
ಪ್ರಾದೇಶಿಕ ಭಾಷೆ, ಇಂಗ್ಲಿಷ್‌ನಲ್ಲಿ ಗ್ಯಾರಂಟಿ ಕಾರ್ಡ್:''ಮನೆ - ಮನೆಗೆ ತೆರಳಿ ಚುನಾವಣಾ ಪ್ರಚಾರ ಮಾಡುವ ಏಕೈಕ ರಾಜ್ಯ ಕೇರಳ. ಎಲ್ಲ ಲೋಕಸಭಾ ಕ್ಷೇತ್ರಗಳ ಎಲ್ಲ ಮನೆಗಳನ್ನು ತಲುಪಲು ನಾವು ಪ್ರಯತ್ನಿಸುತ್ತೇವೆ. ಗ್ಯಾರಂಟಿ ಕಾರ್ಡ್‌ಗಳನ್ನು ಇಲ್ಲಿ ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಅದೇ ರೀತಿ ಇತರ ರಾಜ್ಯಗಳಿಗೆ ಇತರ 13 ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಡ್‌ಗಳನ್ನು ಮುದ್ರಿಸಲಾಗಿದೆ. ಈ ಅಭಿಯಾನವು ಮತದಾರರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ'' ಎಂದು ಕೇರಳದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಪಿ ವಿಶ್ವನಾಥನ್ ಹೇಳಿದರು.