ಸೇಲಂ(ತಮಿಳುನಾಡು):ಬೈಕ್‌ನಲ್ಲಿ ಸಂಚರಿಸುತ್ತಿದ್ದ ದಂಪತಿ ಟ್ರಕ್ಗಳ ಮಧ್ಯೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸೇಲಂನಲ್ಲಿ ಇತ್ತೀಚಿಗೆ ನಡೆಯಿತು. ಆಘಾತಕಾರಿ ಘಟನೆಯ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತರನ್ನು ಬಿಲ್ಡರ್ ಆಗಿ ಕೆಲಸ ಮಾಡುತ್ತಿದ್ದ ಅಲಗರಸನ್ (30) ಮತ್ತು ಪತ್ನಿ ಇಳಮತಿ (25) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳು ಅಚ್ಚರಿ ರೀತಿಯಲ್ಲಿ ಪಾರಾಗಿದ್ದಾರೆ.
ಸಂಪೂರ್ಣ ವಿವರ: ಸೇಲಂ ಜಿಲ್ಲೆಯ ಮೆಟ್ಟೂರು ಪಕ್ಕದ ಕುಂಜಂಡಿಯೂರು ಬೂದೂರಿನ ಬಿಲ್ಡರ್ ಅಲಗರಸನ್ ಮತ್ತು ಇಳಮತಿ ದಂಪತಿಗೆ 5 ವರ್ಷದ ಕಿಶೋರ್ ಮತ್ತು 2 ವರ್ಷದ ಕೃತಿಕ್ ಎಂಬಿಬ್ಬರು ಮಕ್ಕಳಿದ್ದಾರೆ. ಜನವರಿ 28ರಂದು ಭಾನುವಾರ ಅಲಗರಸನ್ ಬೈಕ್‌ನಲ್ಲಿ ಪನ್ನವಾಡಿ ಪ್ರದೇಶದಲ್ಲಿರುವ ತನ್ನ ಮಾವ ಮನೆಗೆ ಪತ್ನಿ, ಮಕ್ಕಳೊಂದಿಗೆ ತೆರಳುತ್ತಿದ್ದರು. ರಾಮನ್ ನಗರದ ಸಮೀಪ ಸಂಚಾರ ದಟ್ಟಣೆ ಇತ್ತು. ಲಾರಿಯೊಂದರ ಹಿಂಬದಿ ಅಲಗರಸನ್ ಬೈಕ್ ನಿಲ್ಲಿಸಿದ್ದಾರೆ. ಇವರ ಬೈಕ್ ಮುಂದೆಯೂ ಒಂದು ಟ್ರಕ್ ನಿಂತಿತ್ತು. ಈ ವೇಳೆ ಹಾರ್ನ್ ಕೂಡ ಹಾಕದೇ ಕರ್ನಾಟಕ ರಾಜ್ಯದ ನೋಂದಣಿಯ ಭತ್ತದ ಮೂಟೆ ತುಂಬಿದ್ದ ಲಾರಿ ಅಲಗರಸನ್ ಬೈಕ್ನ ಹಿಂಬದಿ ಜೋರಾಗಿ ಡಿಕ್ಕಿ ಹೊಡೆದಿದೆ. ಬೈಕ್ ಎರಡೂ ಟ್ರಕ್ ಮಧ್ಯೆ ಸಿಲುಕಿಕೊಂಡಿತು. ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದರು. ಆದರೆ ಅಚ್ಚರಿಯೆಂಬಂತೆ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿದ್ದವರು ತಕ್ಷಣ ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಬದುಕುಳಿದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೆಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಸೇಲಂ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.