ನಾಗ್ಪುರ (ಮಹಾರಾಷ್ಟ್ರ) : ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಾಖೆಗೆ ಭೇಟಿ ನೀಡಿದ್ದರು ಎಂದು ಸಂಘದ ಸಂವಹನ ವಿಭಾಗ ಗುರುವಾರ ಹೇಳಿದೆ.
ಅಂಬೇಡ್ಕರ್ ಅವರು ಆರ್‌ಎಸ್‌ಎಸ್ ನೀತಿಗಳ ವಿರೋಧಿಯಾಗಿದ್ದರು ಎಂಬ ಚರ್ಚೆ ನಡುವೆ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ. "85 ವರ್ಷಗಳ ಹಿಂದೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ನಮ್ಮ ಶಾಖೆಗೆ ಬಂದಿದ್ದರು. ನಮ್ಮೊಂದಿಗೆ ಆತ್ಮೀಯತೆ ಹೊಂದಿದ್ದರು" ಎಂದು ಆರ್‌ಎಸ್‌ಎಸ್ ಸಂವಹನ ವಿಭಾಗವಾದ ವಿಶ್ವ ಸಂವಾದ ಕೇಂದ್ರದ (ವಿಎಸ್‌ಕೆ) ವಿದರ್ಭ ಪ್ರಾಂತವು ಗುರುವಾರ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಡಾ.ಅಂಬೇಡ್ಕರ್ ಅವರು ಜನವರಿ 2, 1940 ರಂದು ಸತಾರಾ ಜಿಲ್ಲೆಯ ಕರಾಡ್‌ನಲ್ಲಿನ ಆರ್‌ಎಸ್‌ಎಸ್ ಶಾಖೆಗೆ ಬಂದಿದ್ದರು. ಅಲ್ಲಿ ಅವರು ಸಂಘದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ್ದರು. ಅವರೇ ಹೇಳಿದಂತೆ "ಕೆಲವು ವಿಷಯಗಳಲ್ಲಿ ಸಂಘದ ಜೊತೆಗೆ ಭಿನ್ನಾಭಿಪ್ರಾಯವಿದ್ದರೂ, ನಾನು ಸಂಘವನ್ನು ಆತ್ಮೀಯ ಭಾವನೆಯಿಂದ ಕಾಣುತ್ತೇನೆ ಎಂದಿದ್ದರು.
ಈ ಬಗ್ಗೆ ಪುಣೆಯ ಮರಾಠಿ ದೈನಿಕ 'ಕೇಸರಿ' ಪತ್ರಿಕೆಯಲ್ಲಿ ಜನವರಿ 9, 1940 ರಂದು ವರದಿ ಪ್ರಕಟವಾಗಿತ್ತು ಎಂದು ವಿಎಸ್‌ಕೆ ತನ್ನ ಹೇಳಿಕೆಯ ಜೊತೆಗೆ ಸುದ್ದಿಯ ತುಣುಕನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಡಿಸೆಂಬರ್ 30 ರಂದು ನೇಮಕ, 31ಕ್ಕೆ ನಿವೃತ್ತಿ: ಶಿಕ್ಷಕಿಯೊಬ್ಬರ ವಿಚಿತ್ರ ಕಹಾನಿ