ನವದೆಹಲಿ : ಯಮುನಾ ನದಿಗೆ ಬಿಜೆಪಿ ವಿಷ ಹಾಕಿದೆ ಎಂಬ ಆರೋಪ ಮಾಡಿದ್ದ ಆಮ್ ಆದ್ಮಿ ಪಕ್ಷ (ಆಪ್) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ದೆಹಲಿ ವಿಧಾನಸಭಾ ಚುನಾವಣೆಗೂ ಒಂದು ದಿನ ಮೊದಲು ಅಂದರೆ, ಸೋಮವಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸಿ ಹರಿಯಾಣದ ಕುರುಕ್ಷೇತ್ರದ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (BNS) ಅಡಿ ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ಆರಂಭವಾಗಿದೆ. ಸಾಕ್ಷ್ಯಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಶಹಾಬಾದ್ ಸ್ಟೇಷನ್ ಹೌಸ್ ಅಧಿಕಾರಿ (SHO) ಸತೀಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹರ್ಷ್ ಮಲ್ಹೋತ್ರಾ ಅವರು, ಕೇಜ್ರಿವಾಲ್ ದೆಹಲಿಯಲ್ಲಿನ ನಿಜವಾದ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಬಿಜೆಪಿ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಆಪ್ ಕಳೆದ 10 ವರ್ಷಗಳ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಪ್ರಚಾರದ ವೇಳೆ ಅಭಿವೃದ್ಧಿ ಬಗ್ಗೆ ಮಾತನಾಡಲು ಸಾಧ್ಯವಾಗದೇ ಬಿಜೆಪಿ ಮೇಲೆ ದೂರುತ್ತಿದೆ ಎಂದು ಆರೋಪಿಸಿದರು.
ಆಪ್ ತನ್ನ ಅಧಿಕಾರವಧಿಯಲ್ಲಿ ದೆಹಲಿ ಜನರಿಗೆ ಶುದ್ಧ ನೀರು ಒದಗಿಸಲು ಸಾಧ್ಯವಾಗಿಲ್ಲ. 2020 ರಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಯಮುನಾ ನದಿ ಸ್ವಚ್ಛಗೊಳಿಸದಿದ್ದರೆ, 2025 ರಲ್ಲಿ ಮತ ಹಾಕಬೇಡಿ ಎಂದು ಹೇಳಿದ್ದರು. ನದಿ ನೀರು ಕಲುಷಿತವಾಗಿರುವ ಕಾರಣ, ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಹರಿಯಾಣ ಬಿಜೆಪಿ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಈ ಹೇಳಿಕೆಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ವಿಚಾರಣೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಕೇಜ್ರಿವಾಲ್ ಆರೋಪವೇನು?: ಬಿಜೆಪಿ ಆಡಳಿತದ ಹರಿಯಾಣ ಸರ್ಕಾರವು ಯಮುನಾ ನೀರಿನಲ್ಲಿ ವಿಷ ಹಾಕಿದೆ. ಆ ನೀರನ್ನು ದೆಹಲಿಗೆ ಸರಬರಾಜು ಮಾಡುತ್ತಿದೆ. ಇಲ್ಲಿನ ಜನರ ಸಾಮೂಹಿಕ ನರಮೇಧ ನಡೆಸಲು ಸಂಚು ರೂಪಿಸಲಾಗಿದೆ ಎಂದು ಗಂಭೀರ ಆಪಾದನೆ ಮಾಡಿದ್ದರು.
ಇದಕ್ಕೆ ಸಾಕ್ಷ್ಯ ಒದಗಿಸಲು ಚುನಾವಣಾ ಆಯೋಗವು ನೋಟಿಸ್ ನೀಡಿತ್ತು. ಇತ್ತ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ದೆಹಲಿಯ ನದಿ ತಟಕ್ಕೆ ಆಗಮಿಸಿ ಅಲ್ಲಿನ ನೀರು ಕುಡಿದು ತಿರುಗೇಟು ನೀಡಿದ್ದರು.
ಅತಿಶಿ ವಿರುದ್ಧವೂ ಕೇಸ್: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಸಿಎಂ ಅತಿಶಿ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಇದರ ವಿರುದ್ಧ ಆಪ್ ಕಿಡಿಕಾರಿದೆ. ಬಿಜೆಪಿಯ ಗೂಂಡಾಗಿರಿ ವಿರೋಧಿಸಿದವರ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ ಎಂದು ಚುನಾವಣಾ ಆಯೋಗವನ್ನು ದೂಷಿಸಿದೆ.
ಇದಕ್ಕೆ ತಿರುಗೇಟು ನೀಡಿರುವ ಚುನಾವಣಾ ಆಯೋಗ, ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು. ಆಯೋಗವನ್ನು ಒಂದು ಪಕ್ಷದ ಸಂಸ್ಥೆಯನ್ನಾಗಿ ಬಿಂಬಿಸುವ ಯತ್ನಗಳು ಸಾಗಿವೆ. ಇದರ ವಿರುದ್ಧ ನಾವು ಚಾಣಾಕ್ಷತನದಿಂದ ಮತ್ತು ಧೈರ್ಯವಾಗಿ ಎದುರಿಸುತ್ತೇವೆ ಎಂದು ಹೇಳಿದೆ.
ದೆಹಲಿ ವಿಧಾನಸಭೆಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.
ಇದನ್ನೂ ಓದಿ: AAPಗೆ ಬಿಗ್ ಬಿಗ್ ಶಾಕ್: ರಾಜೀನಾಮೆಗೆ ಕಾರಣ ನೀಡಿದ 7 ಆಪ್ ಶಾಸಕರು!.. ಕೇಜ್ರಿವಾಲ್ಗೆ ಪತ್ರ!!
ಯಮುನಾಗೆ ವಿಷ ಹಾಕಿದ ಆರೋಪಕ್ಕೆ ಮಾತ್ರ ಸಾಕ್ಷ್ಯ ನೀಡಿ: ಕೇಜ್ರಿವಾಲ್ಗೆ ಚುನಾವಣಾ ಆಯೋಗ ತಾಕೀತು