ನವದೆಹಲಿ : ಪೂಜಾ ಸ್ಥಳಗಳ ಕಾಯ್ದೆ -1991ರ ಪರಿಣಾಮಕಾರಿ ಅನುಷ್ಠಾನಕ್ಕೆ ಕೋರಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಪೀಠದ ಮುಂದೆ ಈ ವಿಷಯ ಬಂದಿತು. ಓವೈಸಿ ಪರ ವಕೀಲ ನಿಜಾಮ್ ಪಾಷಾ ವಾದ ಮಂಡಿಸಿದರು. ನ್ಯಾಯಾಲಯವು ಈ ವಿಷಯದ ಬಗ್ಗೆ ವಿವಿಧ ಮನವಿಗಳನ್ನು ಸ್ವೀಕರಿಸಿದೆ ಮತ್ತು ಹೊಸ ಅರ್ಜಿಯನ್ನ ಬಾಕಿ ಪ್ರಕರಣಗಳೊಂದಿಗೆ ಸೇರಿಸಬಹುದು ಎಂದು ಪೀಠ ಹೇಳಿದೆ.
ಮನವಿ ಆಲಿಸಿದ ನ್ಯಾಯಮೂರ್ತಿಗಳು, ಓವೈಸಿಯ ಹೊಸ ಮನವಿಯನ್ನು ಈ ವಿಷಯದ ಕುರಿತು ಬಾಕಿ ಇರುವ ಪ್ರಕರಣಗಳೊಂದಿಗೆ ಸೇರಿಸಿ ಎಂದು ಹೇಳಿದ್ದಾರೆ. ಫೆಬ್ರವರಿ 17 ರಂದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ವಕೀಲ ಫುಜೈಲ್ ಅಹ್ಮದ್ ಅಯ್ಯುಬಿ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.
ಡಿಸೆಂಬರ್ 12 ರಂದು ಮಧ್ಯಂತರ ಆದೇಶ ನೀಡಿರುವ ಸುಪ್ರಿಂಕೋರ್ಟ್ ಮುಂದಿನ ಆದೇಶದವರೆಗೆ ಮಸೀದಿಗಳ ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಹಾಗೂ ಅಂತಿಮ ಆದೇಶ ನೀಡದಂತೆ ದೇಶದ ಎಲ್ಲ ಹೈಕೋರ್ಟ್ಗಳಿಗೂ ಆದೇಶ ನೀಡಿತ್ತು.
ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ 1991 ರ ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಅರ್ಜಿ ಸೇರಿದಂತೆ, ಒಂದು ಬ್ಯಾಚ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶವನ್ನು ನೀಡಿದೆ.
ಇದನ್ನೂ ಓದಿ : 'ಪೂಜಾ ಸ್ಥಳ ಕಾಯ್ದೆ'ಯಡಿ ಹೊಸ ದಾವೆ, ತೀರ್ಪು ಬೇಡ: ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ - PLACES OF WORSHIP ACT