ಬೆಂಗಳೂರು: ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆಯ ಛಲವಾದಿ ಪಾಳ್ಯದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಯ ಜಾಗವನ್ನು ಮೌಲಾನಾ ಅಜಾದ್ ಮೊರಾರ್ಜಿ ವಸತಿ ಶಾಲೆಗೆ ಹಸ್ತಾಂತರಿಸಿ ಸರ್ಕಾರ ಹೊರಡಿಸಿದ ಆದೇಶ ರದ್ದು ಮಾಡಬೇಕು ಎಂದು ಕೋರಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಪ್ರಕರಣ ಸಂಬಂಧ ವಕೀಲ ಗಿರೀಶ್ ಭಾರದ್ವಾಜ್ ಹಾಗೂ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ, ಸರ್ಕಾರಕ್ಕೆ ಈ ಸೂಚನೆ ನೀಡಿ ಅರ್ಜಿ ವಿಚಾರಣೆ ಮಾರ್ಚ್ 6ಕ್ಕೆ ಮುಂದೂಡಿತು.
ವಕೀಲರ ವಾದ: ವಿಚಾರಣೆ ವೇಳೆ ಅರ್ಜಿದಾರ ಗಿರೀಶ್ ಭಾರಧ್ವಜ್ ಪರ ವಕೀಲ ಪಿ.ವೆಂಕಟೇಶ್ ದಳವಾಯಿ, ''ಛಲವಾದಿ ಪಾಳ್ಯದಲ್ಲಿ ಸುಮಾರು 200 ವರ್ಷಗಳಿಂದ ಬೆಂಗಳೂರು ನಗರದಲ್ಲಿ ಪಶುಗಳಿಗೆ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದ ಪಶು ವೈದ್ಯಕೀಯ ಚಿಕಿತ್ಸಾಲಯವನ್ನು ಅಲ್ಪಸಂಖ್ಯಾತ ಇಲಾಖೆಯ ಸುಪರ್ದಿಗೆ ಸ್ಥಳಾಂತರ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಆದೇಶ ರದ್ದುಗೊಳಿಸಬೇಕು ಹಾಗೂ ಛಲವಾದಿಪಾಳ್ಯದಲ್ಲಿರುವ ಪಶುವೈದ್ಯ ಆಸ್ಪತ್ರೆಯನ್ನು ಈಗಿರುವ ಸ್ಥಳದಲ್ಲೇ ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು'' ಎಂದು ನ್ಯಾಯಾಲಯವನ್ನು ಕೋರಿದರು.
ಇದಕ್ಕೆ ಸರ್ಕಾರಿ ವಕೀಲರು ಹಾಜರಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಕೋರಿದರು. ಇದರಿಂದ ಅರ್ಜಿ ವಿಚಾರಣೆಯನ್ನು ಮಾ.6ಕ್ಕೆ ಮುಂದೂಡಿದ ನ್ಯಾಯಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿತು.
ಅರ್ಜಿದಾರರ ಮನವಿ ಏನು?: ಸಚಿವರಾಗಿರುವ ಜಮೀರ್ ಅಹಮದ್ ಖಾನ್ ಅವರ ಸೂಚನೆ ಮೇರೆಗೆ ಚಾಮರಾಜಪೇಟೆ ಛಲವಾದಿ ಪಾಳ್ಯದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಯ ಜಾಗವನ್ನು ಮೌಲಾನಾ ಅಜಾದ್ ಮೊರಾರ್ಜಿ ವಸತಿ ಶಾಲೆಗೆ ಹಸ್ತಾಂತರಿಸಿ ರಾಜ್ಯ ಸರ್ಕಾರವು 2024ರ ಫೆ.26ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು.
ಇದನ್ನೂ ಓದಿ: ಹೈಕೋರ್ಟ್ ಪ್ರಾಂಗಣದಲ್ಲಿ ವಕೀಲರ ಸಂಘಕ್ಕೆ ಮತಗಟ್ಟೆ ನಿರ್ಮಿಸುವಂತೆ ಅರ್ಜಿ; ನೋಟಿಸ್ ಜಾರಿ