ಚೆನ್ನೈ (ತಮಿಳುನಾಡು):ಕಾರು ಹಾಗೂ ಕಂಟೇನರ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಸುನೀಗಿದ್ದಾರೆ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ರಾಮಂಚೇರಿಯಲ್ಲಿ ಭಾನುವಾರ ರಾತ್ರಿ ಘಟನೆ ಸಂಭವಿಸಿದೆ.
ಮೃತರು ಆಂಧ್ರಪ್ರದೇಶ ಮೂಲದವರಾಗಿದ್ದಾರೆ. ತಿರುವಳ್ಳೂರು ಜಿಲ್ಲೆಯ ರಾಮಂಚೇರಿ ಬಳಿ ಕಾರು ಸಾಗುತ್ತಿದ್ದಾಗ ರಾಜಸ್ಥಾನ ನೋಂದಣಿ ಹೊಂದಿರುವ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದೆ. ನಿನ್ನೆ ರಜೆ ಇದ್ದ ಕಾರಣ ಸ್ನೇಹಿತರೆಲ್ಲ ಸೇರಿಕೊಂಡು ಚಿತ್ತೂರು ಜಿಲ್ಲೆಯ ಕಣ್ಣಿಪಾಕ್ಕಂ ವಿನಾಯಕ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳಿ, ಚೆನ್ನೈಗೆ ವಾಪಸಾಗುತ್ತಿದ್ದರು.
ಘಟನೆಯಲ್ಲಿ ಚೇತನ್, ಯುಕೇಶ್, ನಿತೀಶ್, ವರ್ಮಾ ಮತ್ತು ರಾಮಕೋಮನ್ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚೈತನ್ಯ ಮತ್ತು ವಿಷ್ಣು ಎಂಬ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ತಿರುವಳ್ಳೂರು ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಮೂರನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಪೆರುಮಾಳ್ ಭೇಟಿ ನೀಡಿ, ವಾಹನದಲ್ಲಿ ಸಿಲುಕಿದ್ದ ಯುವಕರ ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು. ಕನಕಮ್ಮಸತ್ರಂ ಪೊಲೀಸರು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಶೋಧ ಕಾರ್ಯ ನಡೆದಿದೆ.
ಇದನ್ನೂ ಓದಿ:ಬಾಬಾ ಸಿದ್ಧನಾಥ ದೇವಸ್ಥಾನದಲ್ಲಿ ಕಾಲ್ತುಳಿತ: 7 ಭಕ್ತರ ಸಾವು, 9 ಮಂದಿಗೆ ಗಾಯ - 7 Died In Stampede In Jehanabad