ಕರ್ನಾಟಕ

karnataka

ETV Bharat / bharat

ಹೈಕೋರ್ಟ್​ನಲ್ಲಿ ಕೇಜ್ರಿವಾಲ್ ಬೇಲ್​ ಅರ್ಜಿ ವಿಚಾರಣೆ: ನಾಳೆ ಹಣದ ಮಾಹಿತಿ ಬಹಿರಂಗ ಎಂದ ಸುನಿತಾ; ಸರಪಳಿ ಕಟ್ಟಿಕೊಂಡು ಸದನಕ್ಕೆ ಬಂದ ಶಾಸಕ - Delhi Excise Policy Case - DELHI EXCISE POLICY CASE

Decision on CM Kejriwal Bail Plea: ದೆಹಲಿ ಹೈಕೋರ್ಟ್​ನಲ್ಲಿ ಇಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ನಡೆದಿದೆ.

Etv Bharat
ಹೈಕೋರ್ಟ್​ನಲ್ಲಿ ಕೇಜ್ರಿವಾಲ್ ಬೇಲ್​ ಅರ್ಜಿ ವಿಚಾರಣೆ

By ETV Bharat Karnataka Team

Published : Mar 27, 2024, 5:39 PM IST

ನವದೆಹಲಿ:ಮದ್ಯ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ತಮ್ಮ ಬಂಧನವನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಇಂದು ಹೈಕೋರ್ಟ್​ ನಡೆಸಿದೆ. ಎರಡು ಕಡೆಯ ವಾದ - ಪ್ರತಿವಾದವನ್ನು ಆಲಿಸಿ ತನ್ನ ತೀರ್ಪು ಕಾಯ್ದಿಸಿದೆ.

ಮಾರ್ಚ್ 21ರಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ತಮ್ಮ ಬಂಧನವು ಕಾನೂನು ಬಾಹಿರವಾಗಿದ್ದು, ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ನ್ಯಾಯಮೂರ್ತಿ ಸ್ವರ್ಣಕಾಂತ್ ಶರ್ಮಾ ನೇತೃತ್ವದ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿತು.

ಸಿಎಂ ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಕೇಜ್ರಿವಾಲ್ ಬಂಧನದ ಹಿಂದೆ ರಾಜಕೀಯ ಕಾರಣವಿದೆ. ಲೋಕಸಭೆ ಚುನಾವಣೆಯಲ್ಲಿ ಕೇಜ್ರಿವಾಲ್​ ಅವರನ್ನು ಮತ್ತು ಅವರ ಪಕ್ಷವನ್ನು ತಟಸ್ಥಗೊಳಿಸುವ ಉದ್ದೇಶದಿಂದ ಬಂಧಿಸಲಾಗಿದೆ ಎಂದು ಹೇಳಿದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಆದೇಶದಂತೆ ಕೇಜ್ರಿವಾಲ್ ಅವರನ್ನು ಬಂಧಿಸುವ ಅವಶ್ಯಕತೆ ಇಲ್ಲ. ತನಿಖೆಗೆ ಸಹಕಾರದ ಆಧಾರದ ಹೆಸರಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದುರುಪಯೋಗಪಡಿಸಿಕೊಂಡಿದೆ ಎಂದು ಸಿಂಘ್ವಿ ಪ್ರತಿಪಾದಿಸಿದರು.

ಇದನ್ನೂ ಓದಿ:ಬಿಆರ್​ಎಸ್​ ನಾಯಕಿ ಕವಿತಾಗೆ ನ್ಯಾಯಾಂಗ ಬಂಧನ, ತಿಹಾರ್ ಜೈಲಿಗೆ ಶಿಫ್ಟ್​

ಈ ಸಮಯದಲ್ಲಿ ನ್ಯಾಯಮೂರ್ತಿಗಳು, ಈ ಅರ್ಜಿಯ ಬಗ್ಗೆ ನೋಟಿಸ್ ನೀಡುವುದಾಗಿ ಮತ್ತು ಅದಕ್ಕೆ ಉತ್ತರವನ್ನು ಸಲ್ಲಿಸಲು ಇಡಿಗೆ ಕಾಲಾವಕಾಶ ನೀಡುವುದಾಗಿ ತಿಳಿಸಿದರು. ಇದೇ ವೇಳೆ, ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಲು ಆದೇಶಿಸುವ ಮೂಲಕ ಮಧ್ಯಂತರ ಪರಿಹಾರವನ್ನು ನೀಡಬೇಕೆಂದು ಸಿಂಘ್ವಿ ಒತ್ತಾಯಿಸಿದರು. ಮತ್ತೊಂದೆಡೆ, ಇಡಿ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಈ ಅರ್ಜಿ ಬಗ್ಗೆ ತಮ್ಮ ನಿಲುವನ್ನು ದಾಖಲಿಸಲು ಮೂರು ವಾರಗಳ ಕಾಲಾವಕಾಶ ನೀಡಬೇಕು. ಅಲ್ಲದೇ, ಮಧ್ಯಂತರ ಪರಿಹಾರಕ್ಕೂ ಸ್ಪಂದಿಸಲು ಸೂಕ್ತ ಕಾಲಾವಕಾಶ ನೀಡಬೇಕೆಂದು ಕೋರಿದರು.

ಇದಕ್ಕೆ ಸಿಂಘ್ವಿ, ಇದು ವಿಳಂಬ ತಂತ್ರವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮುಂದುವರೆದು, ಈ ಬಂಧನದ ತಳಹದಿಯೇ ಸವಾಲಾಗಿದ್ದು, ಹಲವಾರು ಸಮಸ್ಯೆಗಳು ಇವೆ. ಈ ಎರಡೂ ರೀತಿಯಲ್ಲಿ ಹೈಕೋರ್ಟ್‌ನಿಂದ ತಕ್ಷಣದ ನಿರ್ಧಾರದ ಅಗತ್ಯವಿದೆ. ಈ ಬಂಧನ ಕಾನೂನುಬಾಹಿರವಾಗಿದ್ದರೆ, ಬಂಧನದಲ್ಲಿ ಕಳೆದ ಒಂದು ಗಂಟೆಯು ತುಂಬಾ ದೀರ್ಘವಾಗಿರುತ್ತದೆ ಎಂದು ಹೇಳಿದರು.

ಕೋರ್ಟ್​ನಲ್ಲಿ ಮಹತ್ವದ ಮಾಹಿತಿ ಬಹಿರಂಗ - ಸುನಿತಾ ಕೇಜ್ರಿವಾಲ್:ಮತ್ತೊಂದೆಡೆ,ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಇಂದು ಸುದ್ದಿಗೋಷ್ಠಿಯಲ್ಲಿ ನಡೆಸಿ, ಕಳೆದ ಎರಡು ವರ್ಷಗಳಿಂದ ಮದ್ಯ ಹಗರಣ ಎಂದು ಕರೆಯಲ್ಪಡುವ ಪ್ರಕರಣದಲ್ಲಿ ಇಡಿ ದಾಳಿ ನಡೆಸುತ್ತಿದೆ. ಮನೀಶ್ ಸಿಸೋಡಿಯಾ ನಿವಾಸ, ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಅವರ ಮೇಲೂ ದಾಳಿ ನಡೆಸಲಾಗಿದೆ. ಇತ್ತೀಚೆಗೆ ಇಡಿ ನಮ್ಮ ನಿವಾಸದ ಮೇಲೆ ದಾಳಿ ನಡೆಸಿ ಕೇವಲ 73,000 ರೂ.ಗಳನ್ನು ಮಾತ್ರ ಪತ್ತೆ ಮಾಡಿದೆ. ಅದು ಬಿಟ್ಟು ಏನೂ ಸಿಕ್ಕಿಲ್ಲ. ಮಾರ್ಚ್ 28ರಂದು ನ್ಯಾಯಾಲಯದಲ್ಲಿ ಎಲ್ಲವನ್ನೂ ಬಹಿರಂಗಪಡಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಮದ್ಯ ಹಗರಣದ ಹಣ ಎಲ್ಲಿದೆ ಎಂಬುದನ್ನು ಅವರು ಪುರಾವೆಯೊಂದಿಗೆ ಬಹಿರಂಗಪಡಿಸುತ್ತಾರೆ ಎಂದು ತಿಳಿಸಿದ್ದಾರೆ.

ವಿಧಾನಸಭೆ ಅಧಿವೇಶನ:ಮತ್ತೊಂದೆಡೆ, ಸಿಎಂ ಕೇಜ್ರಿವಾಲ್ ಬಂಧನದ ನಡುವೆಯೇ ಇಂದಿನಿಂದ ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿದೆ. ಸದನದ ಕಲಾಪ ಆರಂಭವಾಗುತ್ತಿದ್ದಂತೆ ಕೇಜ್ರಿವಾಲ್ ಬಂಧನವನ್ನು ಖಂಡಿಸಿ ಆಡಳಿತ ಪಕ್ಷದ ಶಾಸಕರು ಗದ್ದಲ ಸೃಷ್ಟಿಸಿದರು. ಇದರಿಂದ ಕಲಾಪವನ್ನು ತಲಾ 15 ನಿಮಿಷಗಳ ಕಾಲ ಎರಡು ಬಾರಿ ಮುಂದೂಡಬೇಕಾಯಿತು. ನಂತರ 12 ಗಂಟೆಗೆ ಆರಂಭ ಮಾಡಿದಾಗಲೂ ಶಾಸಕರ ಧರಣಿ ಮುಂದುವರಿದಿತ್ತು. ಹೀಗಾಗಿ ಸ್ಪೀಕರ್ ರಾಮನಿವಾಸ್ ಗೋಯಲ್ ಕಲಾಪವನ್ನು ಏಪ್ರಿಲ್ 1ಕ್ಕೆ ಮುಂದೂಡಿದರು.

ಇದಕ್ಕೂ ಮೊದಲು ಅಧಿವೇಶನಕ್ಕೆ ಬಂದ ಆಪ್​ ಶಾಸಕರು 'ಮೈನ್ ಭಿ ಕೇಜ್ರಿವಾಲ್' ಎಂಬ ಬರಹ ಹೊಂದಿದ್ದ ಹಳದಿ ಟೀ ಶರ್ಟ್‌ಗಳನ್ನು ಧರಿಸಿದ್ದರು. ಎಲ್ಲ ಶಾಸಕರು ಸೇರಿ ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ, ಶಾಸಕ ಪ್ರವೀಣ್ ಕುಮಾರ್ ಕಬ್ಬಿಣದ ಸರಪಳಿಯಿಂದ ತಮ್ಮನ್ನು ತಾವು ಕಟ್ಟಿಕೊಂಡು ತಮ್ಮ ನಾಯಕನ ಬಂಧನವನ್ನು ಖಂಡಿಸಿದರು.

ಇದನ್ನೂ ಓದಿ:'ನನ್ನ ಬಂಧನ ಕಾನೂನು ಬಾಹಿರ': ನಾಳೆ ಹೈಕೋರ್ಟ್​ನಲ್ಲಿ ಸಿಎಂ ಕೇಜ್ರಿವಾಲ್ ಅರ್ಜಿ ವಿಚಾರಣೆ

ABOUT THE AUTHOR

...view details