ಭೋಪಾಲ್ (ಮಧ್ಯಪ್ರದೇಶ) : ಸಿನಿಮಾಗಳಲ್ಲಿನ ಸಾಹಸ ದೃಶ್ಯಗಳು ಮಕ್ಕಳ ಮೇಲೆ ಗಾಢ ಪರಿಣಾಮ ಬೀರುತ್ತವೆ. ತೆರೆಯ ಮೇಲೆ ನಾಯಕ ನಟ ಮಾಡಿದಂತೆ ತಾನೂ ಮಾಡಬೇಕು ಎಂದು ಇಲ್ಲಸಲ್ಲದ ಸ್ಟಂಟ್ ಮಾಡುತ್ತಿರುತ್ತಾರೆ. ಇದನ್ನು ಪ್ರಶ್ನಿಸಿದವರನ್ನು ಆ ಮಕ್ಕಳು ಶತ್ರುಗಳಂತೆ ಕಾಣುತ್ತಾರೆ. ಇಂಥದ್ದೇ ಒಂದು ಪ್ರಕರಣ ಮಧ್ಯಪ್ರದೇಶದಿಂದ ವರದಿಯಾಗಿದೆ.
ಬಾಲಿವುಡ್ ನಟ ಶಾರೂಖ್ ಖಾನ್ ಅವರ ಸಿನಿಮಾಗಳನ್ನು ನೋಡಿ ಪ್ರೇರೇಪಿತನಾಗಿದ್ದ 11 ವರ್ಷದ ಬಾಲಕ, ತಾನೂ ಅಂತಹ ಸ್ಟಂಟ್ಗಳನ್ನು ಮಾಡಲು ಹೋಗಿ ತಂದೆಯಿಂದ ಬೈಸಿಕೊಂಡು ಪೆಟ್ಟು ತಿಂದಿದ್ದ. ಇದರಿಂದ ಕುಪಿತನಾಗಿ ಅಪ್ಪನ ವಿರುದ್ಧ ಶಾರೂಖ್ಗೆ ದೂರು ನೀಡಲು ಏಕಾಏಕಿ ಮನೆಬಿಟ್ಟು ಉತ್ತರಪ್ರದೇಶದಿಂದ ಮುಂಬೈ ರೈಲು ಹತ್ತಿ ಬಂದಿದ್ದಾನೆ. ಸದ್ಯ ಬಾಲಕನನ್ನು ಭೋಪಾಲ್‌ನ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.
ಶಾರೂಖ್ನ ಅಪ್ಪಟ ಅಭಿಮಾನಿ: ಉತ್ತರಪ್ರದೇಶದ 11 ವರ್ಷದ ಬಾಲಕ ನಟ ಶಾರೂಖ್ ಖಾನ್ ಅಪ್ಪಟ ಅಭಿಮಾನಿ. ಜವಾನ್ ಸಿನಿಮಾದಲ್ಲಿನ ಸಾಹಸಗಳಿಗೆ ಮನಸೋತಿದ್ದ. ಜೊತೆಗೆ ನಟನ 40 ಕ್ಕೂ ಹೆಚ್ಚು ಸಿನಿಮಾಗಳನ್ನು ನೋಡಿದ್ದಾನಂತೆ. ಜವಾನ್ ಸಿನಿಮಾದಲ್ಲಿ ಶಾರೂಖ್ ಯೋಧನ ಪಾತ್ರದಲ್ಲಿ ಮಾಡಿರುವ ಸಾಹಸಗಳು ಬಾಲಕನ ತಲೆಕೆಡಿಸಿವೆ. ಆತ ಯಾವಾಗಲೂ ಅದೇ ಮಾದರಿಯ ಸಾಹಸ ಪ್ರದರ್ಶನ ಮಾಡುತ್ತಿದ್ದನಂತೆ.
ಹೀಗೆ ಮಾಡಲು ಹೋಗಿ ಹಲವು ಬಾರಿ ಪೆಟ್ಟು ಮಾಡಿಕೊಂಡಿದ್ದಾನೆ. ಮಗನ ಹುಚ್ಚಾಟಕ್ಕೆ ತಂದೆ ಬೈದಿದ್ದಾನೆ. ಇಷ್ಟಾದರೂ ಸುಮ್ಮನಾಗದ ಬಾಲಕ ಅಪಾಯಕಾರಿ ಸಾಹಸದಿಂದ ದೂರವಾಗಿರಲಿಲ್ಲ. ಈ ಬಗ್ಗೆ ನೆರೆಹೊರೆಯವರು ದೂರು ನೀಡಿದಾಗ, ಕೋಪಗೊಂಡ ತಂದೆ ಬಾಲಕನಿಗೆ ಹೊಡೆದಿದ್ದಾನೆ.
ಅಪ್ಪನ ವಿರುದ್ಧ ಶಾರೂಖ್ಗೆ ದೂರು ನೀಡಲು ಬಂದ: ತನ್ನನ್ನು ಹೊಡೆದ ತಂದೆಯ ವಿರುದ್ಧ ಆ ಬಾಲಕ ತೀವ್ರ ಅಸಮಾಧಾನಗೊಂಡಿದ್ದಾನೆ. ನಟ ಶಾರೂಖ್ ಖಾನ್ಗೆ ಈ ಬಗ್ಗೆ ದೂರು ನೀಡಿ ಅಪ್ಪನಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿ, ಹೇಳದೆ ಕೇಳದೆ ಮನೆ ಬಿಟ್ಟು ಬಂದಿದ್ದಾನೆ. ಉತ್ತರಪ್ರದೇಶದಿಂದ ಮುಂಬೈಗೆ ಹೊರಡುವ ರೈಲು ಹತ್ತಿದ್ದಾನೆ. ರೈಲು ಮಧ್ಯಪ್ರದೇಶದ ಸಂತ ಹಿರ್ದಾರಾಂ ನಗರ ರೈಲ್ವೆ ನಿಲ್ದಾಣಕ್ಕೆ ಬಂದಾಗ ರೈಲ್ವೆ ಪೊಲೀಸರು ಒಂಟಿ ಮಗುವನ್ನು ಗಮನಿಸಿದ್ದಾರೆ.
ಬಾಲಕನ್ನು ವಿಚಾರಿಸಿದಾಗ ಆತ, ಶಾರೂಖ್ ಖಾನ್ ಭೇಟಿಯಾಗಲು ಮುಂಬೈಗೆ ತೆರಳುತ್ತಿರುವುದಾಗಿ ಹೇಳಿದ್ದಾನೆ. ತನ್ನನ್ನು ತಂದೆ ಹೊಡೆದಿದ್ದು, ಈ ಬಗ್ಗೆ ದೂರು ನೀಡಬೇಕಿದೆ ಎಂದಿದ್ದಾನೆ. ಮಗುವನ್ನು ವಶಕ್ಕೆ ಪಡೆದ ಪೊಲೀಸರು, ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮನೆಬಿಟ್ಟು ಬಂದ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, "ಮಗು ಸಿನಿಮಾಗಳಿಂದ ಪ್ರಭಾವಿತನಾಗಿದೆ. ತಂದೆ ಹೊಡೆದ ಕಾರಣ ಕೋಪಗೊಂಡು ಶಾರೂಖ್ ಖಾನ್ಗೆ ದೂರು ನೀಡಲು ರೈಲು ಹತ್ತಿ ಮುಂಬೈನತ್ತ ಹೊರಟಿದ್ದಾನೆ. ಟಿಕೆಟ್ ಇಲ್ಲದೇ ಪಯಣಿಸುತ್ತಿದ್ದಾಗ ರೈಲ್ವೆ ಪೊಲೀಸರು ವಿಚಾರಿಸಿದ್ದಾರೆ. ಸಿನಿಮಾದಲ್ಲಿ ಶಾರೂಖ್ ಖಾನ್ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವಂತೆ ತನ್ನನ್ನು ಹೊಡೆದ ತಂದೆಗೂ ಬುದ್ಧಿ ಕಲಿಸಬೇಕೆಂದು ಮಗು ಬಯಸಿತ್ತು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಿಒಕೆ ಇಲ್ಲದೇ ಜಮ್ಮು- ಕಾಶ್ಮೀರ ಅಪೂರ್ಣ, ಪಾಕಿಸ್ತಾನ ಉಗ್ರರಿಗೆ ನೆರವು ನಿಲ್ಲಿಸಲಿ: ರಾಜನಾಥ್ ಸಿಂಗ್