ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಸ್ಟಾರ್ಡಮ್ ಹೊಂದಿರುವ ನಟ ಶಿವರಾಜ್ಕುಮಾರ್ ಜನವರಿ 26, ಗಣರಾಜ್ಯೋತ್ಸವದಂದು ಕರುನಾಡಿಗೆ ಮರಳಿದ್ದಾರೆ. 2024ರ ಡಿಸೆಂಬರ್ 24ರಂದು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ನಟ ಚೇತರಿಸಿಕೊಂಡಿದ್ದು, ಅವರ ಆರೋಗ್ಯ ವಿಚಾರಿಸಲು ಗಣ್ಯರು ನಿವಾಸಕ್ಕೆ ಭೇಟಿ ಕೊಡುತ್ತಿದ್ದಾರೆ.
ಕಳೆದ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಗವಾರದಲ್ಲಿನ ಶಿವರಾಜ್ಕುಮಾರ್ ನಿವಾಸಕ್ಕೆ ಭೇಟಿ ಕೊಟ್ಟು, ಆರೋಗ್ಯ ವಿಚಾರಿಸಿದ್ದರು. ಅದರ ಬೆನ್ನಲ್ಲೇ, ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅವರು ಶಿವಣ್ಣನನ್ನು ಭೇಟಿ ಆಗಿದ್ದಾರೆ.
ಸೂಪರ್ ಸ್ಟಾರ್ ಡಾಲಿ ಧನಂಜಯ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನ ಸ್ಟೋರಿ ಸೆಕ್ಷನ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಶಿವರಾಜ್ಕುಮಾರ್ ಅವರನ್ನು ಅವರ ನಾಗವಾರದಲ್ಲಿನ ನಿವಾಸದಲ್ಲಿ ಭೇಟಿ ಆಗಿರೋ ಫೋಟೋ ಇದಾಗಿದೆ. ವರನಟ ಡಾ. ರಾಜ್ಕುಮಾರ್ ಅವರ ದೊಡ್ಡ ಭಾವಚಿತ್ರದೆದುರು ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋ ಇದಾಗಿದ್ದು, ಕಿಂಗ್ ಈಸ್ ಬ್ಯಾಕ್ ಸ್ಟ್ರಾಂಗರ್ ದ್ಯಾನ್ ಎವರ್ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೇತರಿಸಿಕೊಂಡಿರುವ ಶಿವಣ್ಣನನ್ನು ಕಂಡ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಪೋಸ್ಟ್: ಶಿವರಾಜ್ಕುಮಾರ್ ಅವರನ್ನು ಸೋಮವಾರದಂದು ಮುಂಖ್ಯಮಂತ್ರಿ ಭೇಟಿ ಆಗಿದ್ದಾರೆ. ಭೇಟಿಯ ವಿಡಿಯೋ ಹಂಚಿಕೊಂಡ ಸಿಎಂ, ''ವಿದೇಶದಲ್ಲಿ ಚಿಕಿತ್ಸೆ ಪಡೆದು ಅನಾರೋಗ್ಯ ಗೆದ್ದು ಬಂದ ನಟ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದೆ'' ಎಂದು ಬರೆದುಕೊಂಡಿದ್ದಾರೆ. ಸಿಎಂ ಜೊತೆಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸೇರಿದಂತೆ ಹಲವರಿದ್ದರು.
ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವದಂದೇ ಗಂಡು ಮಗುವಿಗೆ ಜನ್ಮ ನೀಡಿದ ಹರಿಪ್ರಿಯಾ : ಮರಿ ಸಿಂಹನ ಫೋಟೋ ಹಂಚಿಕೊಂಡ ವಸಿಷ್ಠ ಸಿಂಹ
ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ, ಕಳೆದ ತಿಂಗಳು ಅವರ ಶಸ್ತ್ರಚಿಕಿತ್ಸೆ ನಡೆಯಿತು. ಮರುದಿನವೇ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದೆ. ಅವರು ವಾಪಸಾದ ಹಿನ್ನೆಲೆ ಅವರ ಆರೋಗ್ಯ ವಿಚಾರಿಸಲು ಇಂದು ಅವರ ನಿವಾಸಕ್ಕೆ ಬಂದೆ. ಬರುವ ತಿಂಗಳಿನಿಂದ ಶಿವಣ್ಣ ಶೂಟಿಂಗ್ಗೆ ತೆರಳುವುದಾಗಿ ಹೇಳಿದ್ದಾರೆಂದು ತಿಳಿಸಿದರು.
ಇದನ್ನೂ ಓದಿ: ಕುರಿ ಕಾಯುವ ಹಳ್ಳಿ ಹೈದನ ಕೈಯಲ್ಲಿ ಬಿಗ್ ಬಾಸ್ ಟ್ರೋಫಿ : ಇದು ಸರಳ ವ್ಯಕ್ತಿತ್ವಕ್ಕೆ ಸಿಕ್ಕ ಗೆಲುವು
ಫೆಬ್ರವರಿ 16ರಂದು ನಟ ಡಾಲಿ ಧನಂಜಯ್ ಹಸೆಮಣೆ ಏರಲಿದ್ದಾರೆ. ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಮದುವೆ ಕಾರ್ಯಕ್ರಮ ಜರುಗಲಿದೆ. ಶನಿವಾರ ಆರತಕ್ಷತೆ, ಭಾನುವಾರ ವಿವಾಹ ಸಮಾರಂಭ ನಡೆಯಲಿದ್ದು, ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗುವ ಸಾಧ್ಯತೆಯಿದೆ.