ನವದೆಹಲಿ:ಪಕ್ಷದ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಆಚಾರ್ಯ ಪ್ರಮೋದ್ ಕೃಷ್ಣಂ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಲಕ್ನೋದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸಿ ಸೋತಿದ್ದ ಕೃಷ್ಣಂ, ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದರು ಮತ್ತು ಕಾಂಗ್ರೆಸ್ ನಾಯಕತ್ವವು ಕಾರ್ಯಕ್ರಮಕ್ಕೆ ಹಾಜರಾಗದಿರುವುದನ್ನು ಟೀಕಿಸಿದ್ದರು.
"ಅಶಿಸ್ತಿನ ನಡವಳಿಕೆ ಮತ್ತು ಪಕ್ಷದ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರಮೋದ್ ಕೃಷ್ಣಂ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸುವ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಸ್ತಾಪವನ್ನು ಕಾಂಗ್ರೆಸ್ ಅಧ್ಯಕ್ಷರು ಅನುಮೋದಿಸಿದ್ದಾರೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೃಷ್ಣಂ ಅವರು ಈ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಫೆಬ್ರವರಿ 19 ರಂದು ಉತ್ತರ ಪ್ರದೇಶದ ಸಂಭಾಲ್ನಲ್ಲಿ ನಡೆಯಲಿರುವ ಶ್ರೀ ಕಲ್ಕಿ ಧಾಮ್ ಶಿಲಾನ್ಯಾಸ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.
ಆಚಾರ್ಯ ಪ್ರಮೋದ್ ಕೃಷ್ಣಂ ಬಗ್ಗೆ ಒಂದಿಷ್ಟು ಮಾಹಿತಿ:ಜನವರಿ 4, 1965 ರಂದು ಬಿಹಾರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕೃಷ್ಣಂ ಸಂಭಾಲ್ನಲ್ಲಿ ಶ್ರೀ ಕಲ್ಕಿ ಫೌಂಡೇಶನ್ ಸ್ಥಾಪಿಸಿದ್ದಾರೆ ಮತ್ತು ಕಲ್ಕಿ ಧಾಮ್ನ ಪೀಠಾಧೀಶ್ವರರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಸಂಭಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಸಂಭಾಲ್ ಮತ್ತು ಲಕ್ನೋ ಎರಡಕ್ಕೂ ಅಭ್ಯರ್ಥಿಗಳನ್ನು ಘೋಷಿಸುವ ಸಮಾಜವಾದಿ ಪಕ್ಷದ ನಿರ್ಧಾರವು ಕೃಷ್ಣಂ ಅವರ ಅಸಮಾಧಾನಕ್ಕೆ ಒಂದು ಕಾರಣವಾಗಿರಬಹುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಉಚ್ಛಾಟನೆಗೆ ಸ್ವಾಗತ ಎಂದ ಕೃಷ್ಣಂ: "ಪಕ್ಷ ವಿರೋಧಿ ಚಟುವಟಿಕೆಗಳಿಂದಾಗಿ ನನ್ನನ್ನು ಆರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂಬುದು ನನಗೆ ನಿನ್ನೆ ತಿಳಿಯಿತು. ನನ್ನನ್ನು ಪಕ್ಷದಿಂದ ಮುಕ್ತಗೊಳಿಸಿದ್ದಕ್ಕಾಗಿ ನಾನು ಕಾಂಗ್ರೆಸ್ಗೆ ಧನ್ಯವಾದ ಹೇಳಲು ಬಯಸುತ್ತೇನೆ." ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಕಾಂಗ್ರೆಸ್ ಪಕ್ಷದ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ರಾಜಕೀಯ ಪ್ರವಾಸೋದ್ಯಮ ಎಂದು ಕೃಷ್ಣಂ ಟೀಕಿಸಿದ್ದರು. ಕಾಂಗ್ರೆಸ್ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದರೆ, ಇತರ ಪಕ್ಷಗಳು ಮುಂಬರುವ 2024 ರ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿವೆ ಎಂದು ಆಚಾರ್ಯ ಹೇಳಿದ್ದರು.
ಇದನ್ನೂ ಓದಿ : ಬಿಜೆಪಿ 400ರ ಗುರಿ ದಾಟಿದರೆ I.N.D.I.A ಮುನ್ನಡೆಸಿದ ಪಕ್ಷವೇ ಅದಕ್ಕೆ ಹೊಣೆಗಾರ: ಗುಲಾಂ ನಬಿ ಆಜಾದ್