ನವದೆಹಲಿ: ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ದಿಲ್ಲಿ ಪೊಲೀಸ್ ಇಲಾಖೆ ಒಂದಾಗಿ ಸಂಚು ರೂಪಿಸಿವೆ ಎಂದು ದೆಹಲಿ ಸಿಎಂ ಅತಿಶಿ ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವರ ವಿರುದ್ಧ ಆರೋಪ; ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಚಿನಲ್ಲಿ ಇಬ್ಬರು ಭಾಗಿಯಾಗಿದ್ದಾರೆ. ಮೊದಲನೆಯದಾಗಿ, ದೆಹಲಿಯ ಅಲ್ಲಲ್ಲಿ ಅರವಿಂದ್ ಕೇಜ್ರಿವಾಲ್ ಮೇಲೆ ಕಲ್ಲೆಸೆಯುವ ಬಿಜೆಪಿ ಕಾರ್ಯಕರ್ತರು ಮತ್ತು ಎರಡನೆಯದಾಗಿ, ಬಿಜೆಪಿ ಮತ್ತು ಅಮಿತ್ ಶಾ ಅವರ ಅಣತಿಯಂತೆ ಕೆಲಸ ಮಾಡುವ ದೆಹಲಿ ಪೊಲೀಸ್ ಇಲಾಖೆ ಇದರಲ್ಲಿ ಭಾಗಿಯಾಗಿದ್ದಾರೆ. ದಿಲ್ಲಿ ಪೊಲೀಸ್ ಇಲಾಖೆ ಮತ್ತು ಬಿಜೆಪಿ ಸೇರಿಕೊಂಡು ಕೇಜ್ರಿವಾಲ್ ಅವರನ್ನು ಕೊಲ್ಲುವ ಸಂಚು ರೂಪಿಸುತ್ತಿವೆ ಎಂದು ಆರೋಪಿಸಿದರು.
ದಾಳಿಗೆ ಬಿಜೆಪಿ ಕಾರ್ಯಕರ್ತರೇ ಕಾರಣ: ದೆಹಲಿಯ ಮಾಜಿ ಸಿಎಂ ಕೇಜ್ರಿವಾಲ್ ಅವರ ಮೇಲೆ ನಡೆದ ಹಲವಾರು ದಾಳಿಗಳಿಗೆ ಬಿಜೆಪಿ ಕಾರ್ಯಕರ್ತರೇ ಕಾರಣ. ಆದರೆ ದಾಳಿಗಳು ನಡೆದಾಗಲೆಲ್ಲ, ಬಿಜೆಪಿ ಒಳಸಂಚಿನ ಭಾಗವಾಗಿರುವ ದೆಹಲಿ ಪೊಲೀಸರು ನಿಷ್ಕ್ರಿಯರಾಗಿದ್ದರು. ಆಪ್ ಸ್ವತಃ ಈ ದಾಳಿಗಳ ಬಗ್ಗೆ ತನಿಖೆ ನಡೆಸಿದ್ದು, ಬಹುತೇಕ ದಾಳಿಗಳಿಗೆ ಬಿಜೆಪಿ ಕಾರ್ಯಕರ್ತರೇ ಕಾರಣ ಎಂಬುದು ಕಂಡು ಬಂದಿದೆ ಎಂದು ಅತಿಶಿ ಹೇಳಿದರು.
ಜನವರಿ 18 ರಂದು ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಕೇಜ್ರಿವಾಲ್ ಮೇಲೆ ಮತ್ತೊಮ್ಮೆ ದಾಳಿ ನಡೆಸಲಾಯಿತು. ಅಂದು ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ನಾವು ಸಾಮಾಜಿಕ ಮಾಧ್ಯಮದಲ್ಲಿ (ದೆಹಲಿ ಪೊಲೀಸರಲ್ಲ) ತನಿಖೆ ಮಾಡಿ ನೋಡಿದಾಗ, ಎಲ್ಲಾ ದಾಳಿಕೋರರು ಬಿಜೆಪಿಗೆ ಸೇರಿದವರು ಎಂಬುದು ಪತ್ತೆಯಾಯಿತು. ಆದರೆ ಈ ಬಗ್ಗೆ ಯಾವುದೇ ತನಿಖೆ ನಡೆಸದಿರುವುದು ಮತ್ತು ದಾಳಿಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಬಿಜೆಪಿ ಮತ್ತು ದೆಹಲಿ ಪೊಲೀಸರು ಒಳಸಂಚು ಮಾಡಿದ್ದಾರೆ ಎಂಬುದು ಕಂಡು ಬರುತ್ತಿದೆ. ನಿನ್ನೆ, ಹರಿ ನಗರದಲ್ಲಿ ಕೇಜ್ರಿವಾಲ್ ಮೇಲೆ ಹಲ್ಲೆ ನಡೆಸಲಾಯಿತು. ಆದರೆ ದೆಹಲಿ ಪೊಲೀಸರು ದಾಳಿಕೋರರನ್ನು ತಡೆಯಲಿಲ್ಲ. ಕೇಜ್ರಿವಾಲ್ ತಮ್ಮ ಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ತೆರಳುತ್ತಿದ್ದಾಗ ಕಾಳಿ ಬಾರಿಯಲ್ಲಿ, ಲಾಠಿ ಮತ್ತು ಕಲ್ಲುಗಳನ್ನು ಹಿಡಿದ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಸಂಜಯ್ ಸಿಂಗ್ ಹೋಗಿ ಆ ದಾಳಿಯನ್ನು ನಿಲ್ಲಿಸಬೇಕಾಯಿತು. ಅಷ್ಟಾದರೂ ಆದರೆ ದೆಹಲಿ ಪೊಲೀಸರು ಸಹಾಯಕ್ಕೆ ಬರಲಿಲ್ಲ ಎಂದು ಅವರು ತಿಳಿಸಿದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಇತ್ತೀಚೆಗೆ ನಡೆದ ದಾಳಿಗಳ ಬಗ್ಗೆ ಆಮ್ ಆದ್ಮಿ ಪಕ್ಷ (ಎಎಪಿ) ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ದೂರು ನೀಡಿದೆ ಎಂದು ಪಕ್ಷದ ಮೂಲಗಳು ಶುಕ್ರವಾರ ತಿಳಿಸಿವೆ.
ಇದನ್ನೂ ಓದಿ : ಭಾರತದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಬಿಕ್ಕಟ್ಟು: ಇಲ್ಲವೇ ಇದಕ್ಕೆ ಪರಿಹಾರ?! - TRAFFIC CONGESTION CRISIS