ರಾಯಚೂರು: ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ಮನೆಗೆ ಅಪರಿಚಿತರು ನುಗ್ಗಿ ಆತಂಕ ಹುಟ್ಟಿರುವ ಘಟನೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲೆ ದೇವದುರ್ಗ ಪಟ್ಟಣದಲ್ಲಿ ಶಾಸಕರ ನಿವಾಸದಲ್ಲಿ 2025 ಜ. 23ರಂದು ಘಟನೆ ಜರುಗಿದೆ. ಶಾಸಕರ ಮನೆಯ ಕೂಗಳತೆ ದೂರದಲ್ಲಿ ಬೈಕ್ ನಿಲ್ಲಿಸಿದ ಅಪರಿಚಿತರು ಮನೆಯ ಹಿಂಬಾಗಿಲಿನಿಂದ ನುಗ್ಗಿದ್ದಾರೆ.
ಈ ವೇಳೆ ಅಕ್ಕಪಕ್ಕದವರು ಕೂಗಿದಾಗ ಅಪರಿಚಿತರು ಪರಾರಿಯಾಗಿದ್ದಾರೆ. ಘಟನೆ ಬಳಿಕ ನಿನ್ನೆ ದೇವದುರ್ಗ ಪೊಲೀಸರಿಗೆ ಘಟನೆಯ ಬಗ್ಗೆ ಶಾಸಕಿ ಕರೆಮ್ಮ ನಾಯಕ್ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಶಾಸಕಿ ಕರೆಮ್ಮ ನಾಯಕ್ ಮಾತನಾಡಿ, ''ನಾನು ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಮಲಗಿದ್ದೆ. ಆಗ ರಾತ್ರಿ 11.30 ರ ವೇಳೆ ಯಾರೋ ಮೂವರು ಹುಡುಗರು ಬಂದು ಮನೆಯ ಕಿಟಕಿ ಪಕ್ಕದಲ್ಲಿ ನಿಂತಿರುವುದನ್ನ ನಮ್ಮ ಮನೆಯವರು ನೋಡಿದ್ದಾರೆ. ನಂತರ ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಮ್ಮ ಪಿಎಗೆ ಮಾಹಿತಿ ನೀಡಿದ್ದಾರೆ. ಅವರು ಕೂಡಾ 112ಗೆ ಮಾಹಿತಿ ನೀಡಿದ್ದಾರೆ. ಅದಾದ ಮೇಲೆ ಅಪರಿಚಿತರು ಮಾಳಿಗೆ ಹಿಂದಿನಿಂದ ಜಿಗಿದು ಹೋಗಿದ್ದಾರೆ ಎಂಬುದು ನನಗೆ ಬೆಳಗ್ಗೆ ಗೊತ್ತಾಗಿದೆ. ನಾನು ಮಲಗಿದ್ದ ಕಿಟಕಿಯ ಪಕ್ಕದಲ್ಲಿ ಬಂದು ನಿಂತಿದ್ದರು ಅಂದ್ರೆ ನನ್ನನ್ನ ಯಾವ ರೀತಿ ಟಾರ್ಗೇಟ್ ಮಾಡಿದ್ದಾರೆ ಎಂದು ನನಗೆ ಅನುಮಾನ ಬರುತ್ತಿದೆ. ಅವರು ಯಾಕೆ ಬಂದಿದ್ದರು ಎಂಬುದು ತನಿಖೆಯಿಂದ ಗೊತ್ತಾಗಲಿದೆ'' ಎಂದರು.
ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಿ ಅಂತ ಶಾಸಕಿ ಪೊಲೀಸರಿಗೆ ತಿಳಿಸಿದ್ದಾರೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಕೆಮಿಕಲ್ ಸೇಂದಿ ತಯಾರಿಸುತ್ತಿದ್ದ ಮನೆಯ ಮೇಲೆ ದಾಳಿ: ಸೇಂದಿ ಜಪ್ತಿ, ಮೂವರು ವಶಕ್ಕೆ - CHEMICAL SENDHI SEIZED