ನವದೆಹಲಿ: ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ನಡುವಿನ ಐದು ತಿಂಗಳ ಅವಧಿಯಲ್ಲಿ ಹಿಮಾಚಲ ಪ್ರದೇಶದ ಜನಸಂಖ್ಯೆಗೆ ಸಮಾನವಾದ ಸುಮಾರು 70 ಲಕ್ಷ ಜನರನ್ನು ಆ ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಈ ಬಗ್ಗೆ ಚುನಾವಣಾ ಆಯೋಗ ದಾಖಲೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಲೋಕಸಭೆಯಲ್ಲಿಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಮಾತನಾಡಿದ ಅವರು, ಕಳೆದ ವರ್ಷ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಆದರೆ, ಚುನಾವಣಾ ಆಯೋಗ ಸೂಕ್ತ ದಾಖಲೆಗಳನ್ನು ನೀಡುವ ವಿಶ್ವಾಸವಿಲ್ಲ ಎಂದರು.
ಜೂನ್‌ನಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು ನವೆಂಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯ ನಡುವೆ ಮತದಾರರ ಪಟ್ಟಿಯಲ್ಲಿ 70 ಲಕ್ಷದಷ್ಟು ವ್ಯತ್ಯಾಸವಾಗಿದೆ. ಏಕಾಏಕಿ ಐದೇ ತಿಂಗಳಲ್ಲಿ ಅಷ್ಟು ಪ್ರಮಾಣದಲ್ಲಿ ಸೇರ್ಪಡೆ ಹೇಗಾಯಿತು ಎಂದು ಪ್ರಶ್ನಿಸಿದರು. ಶಿರಡಿಯ ಕಟ್ಟಡವೊಂದರಲ್ಲಿ ಲೋಕಸಭಾ ಚುನಾವಣೆಯ ನಂತರ ಸುಮಾರು 7 ಸಾವಿರ ಹೊಸ ಮತದಾರರು ಸೇರ್ಪಡೆ ಮಾಡಿದ್ದಾರೆ ಎಂದು ಉದಾಹರಣೆ ನೀಡಿದರು.
ಒಂದು ರಾಜ್ಯದ ಜನಸಂಖ್ಯೆಯಷ್ಟು ಸೇರ್ಪಡೆ: ಲೋಕಸಭೆ ಚುನಾವಣೆಯ ನಂತರ ಐದು ತಿಂಗಳ ಅಂತರದಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮೊದಲು ಹಿಮಾಚಲ ಪ್ರದೇಶದ ಜನಸಂಖ್ಯೆಯಷ್ಟು ಮಂದಿಯನ್ನು ಮತದಾರರ ಪಟ್ಟಿಯಲ್ಲಿ ಹೇಗೆ ಸೇರಿಸಲಾಯಿತು?. ಇದು ಬರಿಯ ಆರೋಪವಲ್ಲ. ಇಲ್ಲೇನೋ ಗೋಲ್ಮಾಲ್ ನಡೆದಿದೆ ಎಂಬುದಕ್ಕೆ ಸಾಕ್ಷಿ ಎಂದು ದೂಷಿಸಿದರು.
ಈ ಬಗ್ಗೆ ಚುನಾವಣಾ ಆಯೋಗವು ಲೋಕಸಭೆ ಮತ್ತು ವಿಧಾನಸಭೆ ಮತದಾರರ ಪಟ್ಟಿಯನ್ನು ಪ್ರತ್ಯೇಕವಾಗಿ ನೀಡಬೇಕು. ಹೊಸದಾಗಿ ಸೇರ್ಪಡೆಯಾದ ಎಲ್ಲಾ ಬೂತ್ಗಳ ಮತದಾರರ ಹೆಸರು, ವಿಳಾಸ ಸಹಿತ ದಾಖಲೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಆಯುಕ್ತರ ನೇಮಕ ಸಮಿತಿಗೆ ಆಕ್ಷೇಪ: ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಈ ಹಿಂದೆ ಸಮಿತಿಯಲ್ಲಿ ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡಿರುತ್ತಿತ್ತು. ಈಗ ಮುಖ್ಯ ನ್ಯಾಯಾಧೀಶರನ್ನು ಸಮಿತಿಯಿಂದ ತೆಗೆದುಹಾಕಲಾಗಿದೆ. ಇದು ಸರ್ಕಾರದ ಬಲ ಹೆಚ್ಚಿಸಿಕೊಳ್ಳಲು ಮಾಡಿದ ನಿರ್ಧಾರವಾಗಿದೆ. ಇದರಿಂದ ವಿಪಕ್ಷ ನಾಯಕನ ಆಕ್ಷೇಪಕ್ಕೆ ಬೆಲೆ ಎಲ್ಲಿರುತ್ತದೆ ಎಂದು ಕೇಳಿದರು.
ಇದನ್ನೂ ಓದಿ: ಮೇಕ್ ಇನ್ ಇಂಡಿಯಾ ಯೋಜನೆ ಉತ್ತಮವಾಗಿದ್ದರೂ, ವಿಫಲ: ರಾಹುಲ್ ಗಾಂಧಿ