ನವದೆಹಲಿ:ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ವಿವಿಧ ರಾಜ್ಯಗಳಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಕರ್ನಾಟಕದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದರು.
ವಿಜಯಪುರದಿಂದ ಹೆಚ್.ಆರ್.ಆಲಗೂರ್ (ರಾಜು), ಹಾವೇರಿಯಿಂದಆನಂದಸ್ವಾಮಿ ಗಡ್ಡದೇವರ ಮಠ, ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್, ಹಾಸನದಿಂದ ಶ್ರೇಯಸ್ ಪಟೇಲ್, ತಮಕೂರಿನಿಂದ ಮುದ್ದಹನುಮೇಗೌಡ, ಮಂಡ್ಯದಿಂದ ವೆಂಕಟರಾಮೇಗೌಡ (ಸ್ಟಾರ್ ಚಂದ್ರು), ಬೆಂಗಳೂರು ಗ್ರಾಮೀಣದಿಂದ ಡಿ.ಕೆ.ಸುರೇಶ್ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ.
ಕರ್ನಾಟಕದಲ್ಲಿ ಒಟ್ಟು 28 ಲೋಕಸಭೆ ಕ್ಷೇತ್ರಗಳು ಇವೆ. ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದೇ ಒಂದು ಕ್ಷೇತ್ರದಲ್ಲಿ ಗೆದ್ದಿತ್ತು. ಆದರೆ, ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 135 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ಹೀಗಾಗಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದೆ.
ರಾಜ್ಯದಿಂದ ಕಾಂಗ್ರೆಸ್ನ ಏಕೈಕ ಹಾಲಿ ಸಂಸದರಾದ ಡಿ.ಕೆ.ಸುರೇಶ್ ಅವರಿಗೆ ಈ ಬಾರಿ ಕೂಡ ಬೆಂಗಳೂರು ಗ್ರಾಮೀಣ ಕ್ಷೇತ್ರದಿಂದಲೇ ಟಿಕೆಟ್ ನೀಡಲಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಗೀತಾ ಸ್ಪರ್ಧಿಸಿ ಸೋತಿದ್ದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
ತುಮಕೂರು ಕ್ಷೇತ್ರದಿಂದ ಮಾಜಿ ಸಂಸದ ಮುದ್ದಹನುಮೇಗೌಡ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಈ ಹಿಂದೆ ಕಾಂಗ್ರೆಸ್ನಿಂದಲೇ ಗೆದ್ದಿದ್ದ ಮುದ್ದಹನುಮೇಗೌಡ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ಗೆ ಮರಳಿದ್ದರು. ಜೆಡಿಎಸ್ ಪ್ರಾಬಲ್ಯ ಹೊಂದಿರುವ ಹಾಸನ ಕ್ಷೇತ್ರದಲ್ಲಿ ಶ್ರೇಯಸ್ ಪಟೇಲ್ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಟಾರ್ ಚಂದ್ರು ಅವರಿಗೆ ಕಾಂಗ್ರೆಸ್ ಅವಕಾಶ ನೀಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಲಬುರಗಿ ಸೇರಿ 21 ಕ್ಷೇತ್ರಗಳಿಗೆ ಇನ್ನೂ ಕಾಂಗ್ರೆಸ್ ಟಿಕೆಟ್ ಘೋಷಿಸಬೇಕಿದೆ.
ಲೋಕಸಭಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಗುರುವಾರ ಕೇಂದ್ರ ಚುನಾವಣಾ ಸಮಿತಿ (ಸಿಇಸಿ)ಯ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು. ಈ ಬಗ್ಗೆ ಇಂದು ಪ್ರತಿಕ್ರಿಯಿಸಿದ್ದ ಅವರು, ನಾವು ಸಭೆಯಲ್ಲಿ ಶೇ.50ರಷ್ಟು ಕ್ಷೇತ್ರಗಳ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ. ಈ ಬಾರಿ ತಮ್ಮ ಸ್ಪರ್ಧೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರೇ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದರು.
ಇದನ್ನು ಓದಿ:ಲೋಕ ಸಮರಕ್ಕೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ: ರಾಹುಲ್ ಗಾಂಧಿ ಸೇರಿ 39 ಅಭ್ಯರ್ಥಿಗಳ ಹೆಸರು ಪ್ರಕಟ