ಪುಣೆ(ಮಹಾರಾಷ್ಟ್ರ): ಹಣದ ವಿಚಾರಕ್ಕೆ ಸಹೋದ್ಯೋಗಿಗಳ ನಡುವೆ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯ ಕಂಡಿದೆ. ಬಿಪಿಒದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಸಹೋದ್ಯೋಗಿ ಯುವಕನೇ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಮಂಗಳವಾರ ನಡೆದಿದೆ. ಇಲ್ಲಿನ ಯರವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯರವಾಡದಲ್ಲಿರುವ ಬಿಪಿಒವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕಂಪನಿಯ ಪಾರ್ಕಿಂಗ್ ಸ್ಥಳದಲ್ಲಿ ಈ ಕೃತ್ಯ ಎಸಗಿದ್ದಾನೆ. ಕಾಟ್ರಾಜ್ ಎಂಬಲ್ಲಿನ ನಿವಾಸಿ ಶುಭದಾ ಶಂಕರ್ ಕೊಡರೆ (28) ಕೊಲೆಗೀಡಾದ ಯುವತಿ. ಶಿವಾಜಿನಗರ ನಿವಾಸಿ ಕೃಷ್ಣ ಸತ್ಯನಾರಾಯಣ ಕನೋಜ (30) ಈ ಕೃತ್ಯ ಎಸಗಿದಾತ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಡಬ್ಲ್ಯೂಎನ್ಎಸ್ ಗ್ಲೋಬಲ್ ಎಂಬ ಸಂಸ್ಥೆಯಲ್ಲಿ ಇಬ್ಬರೂ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ವಾಗ್ವಾದ ನಡೆದು ಘಟನೆ ನಡೆದಿದೆ. ಮಂಗಳವಾರ ಸಂಜೆ 6.15ರ ಸುಮಾರಿಗೆ ಹರಿತ ಆಯುಧದಿಂದ ಯುವಕ ಹಲ್ಲೆ ಮಾಡಿದ್ದು, ಆಕೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.