ಮುಜಾಫರ್ಪುರ, ಬಿಹಾರ:ಒಂದು ಕಾಲದಲ್ಲಿ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಈಗ ರೆಕ್ಕೆ ಬಿಚ್ಚಿ ಹಾರಾಟ ನಡೆಸುತ್ತಿದ್ದಾರೆ. ಪಂಜರದಿಂದ ಹೊರ ಬಂದ ಗಿಳಿಗಳಂತೆ ನೀಲಾಕಾಶದಲ್ಲಿ ತೇಲಾಡುತ್ತಿದ್ದಾರೆ. ಅಡುಗೆ ಮನೆಯಿಂದ ಹೊರ ಬರುತ್ತಿರುವ ಗ್ರಾಮೀಣ ಮಹಿಳೆಯರು ಈಗ ತಮ್ಮ ಧೈರ್ಯದಿಂದ ಆಕಾಶದ ಎತ್ತರ ಏರುತ್ತಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಹೊಸ ಹೊಸ ಇತಿಹಾವನ್ನು ಸಷ್ಟಿಸುತ್ತಿದ್ದಾರೆ. ವಾಸ್ತವವಾಗಿ, ಬಿಹಾರದ ಸಣ್ಣ ಭೂಮಿ ಹೊಂದಿರುವ ರೈತರಿಗೆ ಈ 'ಸೋಲಾರ್ ದೀದಿಗಳು' ವರವಾಗುತ್ತಿದ್ದಾರೆ.
ಮುಜಾಫರ್ಪುರದ ಸೋಲಾರ್ ದೀದಿಯರು: ಇದು ಬಿಹಾರದ ಮುಜಾಫರ್ಪುರ ಜಿಲ್ಲೆಯ ಬೋಚಹಾನ್ ಬ್ಲಾಕ್ನ ಲೋಹ್ಸಾರಿ ಪಂಚಾಯತ್ನ ರತನ್ಪುರ ಗ್ರಾಮದ ಇಬ್ಬರು ಮಹಿಳಾ ಉದ್ಯಮಿಗಳಾದ ಬಾಲೇಶ್ವರಿ ದೇವಿ ಮತ್ತು ಉಷಾ ದೇವಿ ಅವರ ಸಾಹಸಗಾಥೆಯ ಕಥೆ. 2023 ರಲ್ಲಿ ಸೌರಶಕ್ತಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ನಂತರ, ಈ ಇಬ್ಬರು ಮಹಿಳೆಯರ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಮೊದಲು ಮನೆ, ದನಕರುಗಳನ್ನು ಸಾಕುತ್ತಿದ್ದ ಈ ಮಹಿಳೆಯರು ಈಗ ಕೃಷಿ ಮಾಡುವುದಲ್ಲದೇ ಸೋಲಾರ್ ನಿಂದ ಉತ್ತಮ ಲಾಭ ಗಳಿಸುತ್ತಿದ್ದಾರೆ. ಈಗ ಬಾಲೇಶ್ವರಿ ಮತ್ತು ಉಷಾ ಆ ಪ್ರದೇಶದಲ್ಲಿ ಸೋಲಾರ್ ದೀದಿಯರು ಎಂದು ಕರೆಸಿಕೊಳ್ಳುತ್ತಿದ್ದಾರೆ.
ಕಠಿಣ ಪರಿಶ್ರಮದಿಂದ ಯಶಸ್ವಿ ಉದ್ಯಮಿಗಳಾಗಿದ್ದಾರೆ:ಸೌರಶಕ್ತಿ ನೀರಾವರಿ ಅಳವಡಿಸಿಕೊಂಡ ನಂತರ ಈ ಮಹಿಳೆಯರ ಜೀವನ ಸುಧಾರಿಸಿದೆ. ಬದುಕು ಬಂಗಾರವಾಗಿದೆ. ತಮ್ಮ ಜೀವನವನ್ನಷ್ಟೇ ಬೆಳಕಾಗಿಸಿಕೊಳ್ಳುವುದಲ್ಲದೇ ಇತರರ ಬಾಳಲ್ಲೂ ಬೆಳಕಾಗುತ್ತಿದ್ದಾರೆ. ಈ ಇಬ್ಬರು ಮಹಿಳೆಯರು ತಮ್ಮ ಸುತ್ತಲಿನ ಸಣ್ಣ ರೈತರಿಗೆ ಸಹಾಯ ಮಾಡಲು ಶುರು ಮಾಡಿದ್ದಾರೆ. ಸೌರಶಕ್ತಿ ಪಂಪ್ಗಳ ಮೂಲಕ ಹತ್ತಿರದ ರೈತರಿಗೆ ಕಡಿಮೆ ದರದಲ್ಲಿ ನೀರು ಒದಗಿಸುತ್ತಿದ್ದಾರೆ. ಮೊದಲು ಡೀಸೆಲ್ ಅಥವಾ ವಿದ್ಯುಚ್ಛಕ್ತಿಯಿಂದ ಚಾಲನೆಯಲ್ಲಿರುವ ಪಂಪ್ಗಳ ಬೆಲೆ ಸಾಕಷ್ಟು ಹೆಚ್ಚಿತ್ತು. ಆದರೆ, ಸೌರ ಪಂಪ್ಗಳಿಂದಾಗಿ ನೀರಾವರಿ ವೆಚ್ಚವು ಗಮನಾರ್ಹವಾಗಿ ಕಡಿಮೆಯಾಗಿದೆ.
ಅಗ್ಗದ ದರದಲ್ಲಿ ನೀರು ಪೂರೈಕೆ: ಬಿಹಾರದಲ್ಲಿ ರೈತರಿಗೆ ಕಡಿಮೆ ಭೂಮಿ ಹೊಂದಿದ್ದಾರೆ. ಸಣ್ಣ ಭೂಮಿ ಹೊಂದಿರುವವರು ನೀರಾವರಿಯಲ್ಲಿ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ರೈತರು ಅಕ್ಕಪಕ್ಕದ ರೈತರಿಂದ ನೀರು ಖರೀದಿಸುವ ಅನಿವಾರ್ಯತೆ ಕೂಡಾ ಇದೆ ಅಂತಾರೆ ಸೋಲಾರ್ ದೀದಿ ಉಷಾ ದೇವಿ
ವಿದ್ಯುತ್ ಪಂಪ್ ಮೂಲಕ ನೀರು ಪೂರೈಸಲು ಗಂಟೆಗೆ ಸುಮಾರು 125 ರಿಂದ 150 ರೂ. ದರ ಇದೆ, ಡೀಸೆಲ್ ಪಂಪ್ ಮೂಲಕ ನೀರು ಪೂರೈಸಲು ಗಂಟೆಗೆ 150 ರಿಂದ 200 ರೂ ವೆಚ್ಚವಾಗುತ್ತದೆ. ಒಂದು ಗಂಟೆಯಲ್ಲಿ 3 ರಿಂದ 4 ಕಟ್ಟೆಗಳಿಗೆ ನೀರುಣಿಸಬಹುದು. ಆದರೆ ಸೋಲಾರ್ ಪಂಪ್ನಿಂದ ಕಡಿಮೆ ವೆಚ್ಚ ವಾಗುತ್ತದೆ - ಉಷಾದೇವಿ, ಸೋಲಾರ್ ದೀದಿ, ಮುಜಾಫರ್ಪುರ
ಸೌರಶಕ್ತಿ ನೀರಾವರಿಯಿಂದ ಹೆಚ್ಚಿದ ಲಾಭ : ಸೋಲಾರ್ ಪಂಪ್ಗಳಿಂದಾಗಿ ರೈತರು ಇನ್ನು ಮುಂದೆ ವಿದ್ಯುತ್ ಕಡಿತ ಅಥವಾ ಡೀಸೆಲ್ ಬೆಲೆ ಏರಿಕೆ ಬಗ್ಗೆ ಚಿಂತಿಸಬೇಕಾಗಿಲ್ಲ ಎನ್ನುತ್ತಾರೆ ಉಷಾದೇವಿ ಮತ್ತು ಅವರ ಪತಿ ಮುಖೇಶ್ ಸಾಹ್. ಸೋಲಾರ್ ಪಂಪ್ಗಳು 5 ಹೆಚ್ ಪಿ ಸಾಮರ್ಥ್ಯ ಹೊಂದಿವೆ. ಇದರಿಂದ ರೈತರು ಈಗ ಭತ್ತ, ಜೋಳ ಮತ್ತಿತರ ಆಹಾರ ಬೆಳೆಗಳ ಜತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ.