ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯನ್ನು ಎಲ್ಲ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ವಿಸ್ತರಿಸುವುದಾಗಿ ಕೇಂದ್ರ ಸರಕಾರ ಗುರುವಾರ ಪ್ರಕಟಿಸಿದೆ. ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಘೋಷಣೆ ಮಾಡಿದ್ದಾರೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ-ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ) ವಿಶ್ವದ ಅತಿದೊಡ್ಡ ಸಾರ್ವಜನಿಕ ಅನುದಾನಿತ ಆರೋಗ್ಯ ವಿಮಾ ಯೋಜನೆಯಾಗಿದ್ದು, ಇದು ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಲು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ. ವಿಮೆ ನೀಡುತ್ತದೆ.
ಈ ಯೋಜನೆಯು 30.6 ಕೋಟಿ ಬಡ ಮತ್ತು ದುರ್ಬಲ ಕುಟುಂಬಗಳನ್ನು ಒಳಗೊಂಡಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯು 2018 ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 6.2 ಕೋಟಿ ಆಸ್ಪತ್ರೆ ದಾಖಲಾತಿಗಳಿಗೆ ಯಶಸ್ವಿಯಾಗಿ ವಿಮಾ ಸೌಲಭ್ಯ ನೀಡಿದೆ.
ಎಬಿ-ಪಿಎಂಜೆಎವೈ ಯೋಜನೆ ಸಂಪೂರ್ಣವಾಗಿ ನಗದುರಹಿತ ಮತ್ತು ಕಾಗದರಹಿತವಾಗಿದೆ. ಫಲಾನುಭವಿಗಳು ನಿಗದಿತ ಪ್ಯಾಕೇಜ್ ಗಳ ಅಡಿಯಲ್ಲಿ ಚಿಕಿತ್ಸೆ ಪಡೆಯಬಹುದು. ಎಂಪಾನೆಲ್ ಮಾಡಲಾದ ಆರೋಗ್ಯ ಸಂಸ್ಥೆಗಳಿಗೆ ಪ್ರಮಾಣೀಕೃತ ದರಗಳೊಂದಿಗೆ ನಿರ್ದಿಷ್ಟ ಆರೋಗ್ಯ ಪ್ಯಾಕೇಜ್ಗಳ ಆಧಾರದ ಮೇಲೆ ಪಾವತಿಸಲಾಗುತ್ತದೆ.
ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ: ಇದು ಕೇಂದ್ರ ಸರ್ಕಾರದ ಮಹತ್ವದ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆ. ಕಡಿಮೆ ಆದಾಯ ಹೊಂದಿರುವ ಜನರಿಗೆ ಉಚಿತ ಆರೋಗ್ಯ ವಿಮೆ ಸೌಲಭ್ಯವನ್ನು ಇದು ಒದಗಿಸುತ್ತದೆ. ಅಂದಾಜು ದೇಶದ ಸುಮಾರು ಅರ್ಧದಷ್ಟು (ಶೇ.50) ಜನರು ಈ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತಾರೆ. ಈ ಮೂಲಕ ಜನರಿಗೆ ಪ್ರಾಥಮಿಕ ಆರೋಗ್ಯ ಪ್ರಯೋಜನಗಳು ಲಭ್ಯವಾಗುತ್ತಿವೆ. ಈ ಕಾರ್ಯಕ್ರಮವು ರಾಷ್ಟ್ರೀಯ ವಿಮಾ ನೀತಿಯ ಭಾಗವಾಗಿದೆ. 2018ರಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಾರಿಗೆ ತಂದಿದೆ.
ಅಂಡ್ರಾಯ್ಡ್ ಮೊಬೈಲ್‍ಗಳ ಮೂಲಕ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಆಯುಷ್ಮಾನ್ ಭಾರತ್ ಕಾರ್ಡ್‍ಗಳನ್ನು ನೀಡಲಾಗುತ್ತಿದೆ. ಒಂದು ವೇಳೆ ತಾಂತ್ರಿಕ ತೊಂದರೆ ಕಂಡುಬಂದಲ್ಲಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಮೂಲಕವೂ ಕಾರ್ಡ್‍ಗಳನ್ನು ಮಾಡಿಕೊಡಲಾಗುತ್ತದೆ. ಈ ಕಾರ್ಡ್‍ಗಳಿಂದ ಬಿಪಿಎಲ್ ಕುಟುಂಬಗಳು ವಾರ್ಷಿಕ 5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬಗಳು ವಾರ್ಷಿಕ 1.5 ಲಕ್ಷದವರೆಗೆ ಸುಸಜ್ಜಿತ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ವೆಚ್ಚ ಸೌಲಭ್ಯ ಪಡೆದುಕೊಳ್ಳಬಹುದು.
ಇದನ್ನೂ ಓದಿ: ಆಶಾ ಕಾರ್ಯಕರ್ತೆಯರಿಗೆ ಪಿಂಚಣಿ ಸೌಲಭ್ಯ ಇಲ್ಲ, ಗ್ಯಾರಂಟಿಗಳು ಸಿಗಲಿವೆ: ದಿನೇಶ್ ಗುಂಡೂರಾವ್