ನವದೆಹಲಿ:ದೇಶದಲ್ಲಿ ನಡೆದ ಎರಡು ರೈಲು ಅಪಘಾತಗಳ ಬಗ್ಗೆ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ವಿರುದ್ಧ ಕಿಡಿಕಾರಿದೆ. ಗುರುವಾರ ಸಂಭವಿಸಿದ ಮೊದಲ ಘಟನೆಯಲ್ಲಿ, ಉತ್ತರ ಪ್ರದೇಶದ ಗೊಂಡಾದಲ್ಲಿ ಪ್ಯಾಸೆಂಜರ್ ರೈಲು ಹಳಿತಪ್ಪಿ 3 ಮಂದಿ ಸಾವನ್ನಪ್ಪಿದ್ದು, ಮತ್ತು 30 ಮಂದಿ ಗಾಯಗೊಂಡಿದ್ದಾರೆ. ದಿಬ್ರುಗಢ ಎಕ್ಸ್‌ಪ್ರೆಸ್ ರೈಲಿನ ಮುಂಭಾಗದಿಂದ 4 ರಿಂದ 5 ಬೋಗಿಗಳು ಹಳಿತಪ್ಪಿದ್ದವು.
ಎರಡನೇ ಘಟನೆಗೆ ಸಂಬಂಧಿಸಿದಂತೆ, ಶುಕ್ರವಾರ ಸಂಜೆ ಗುಜರಾತ್‌ನ ವಲ್ಸಾದ್‌ನಲ್ಲಿ ಗೂಡ್ಸ್ ರೈಲಿನ ವ್ಯಾಗನ್ ಹಳಿ ತಪ್ಪಿತ್ತು. ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೊಂದರೆಯಾಗಿದೆ.
ಎಎಪಿ ಕೇಂದ್ರದ ವಿರುದ್ಧ ವಾಗ್ದಾಳಿ:"ಮೋದಿ ಸರ್ಕಾರದಲ್ಲಿ ಮತ್ತೊಂದು ರೈಲು ಅಪಘಾತವಾಗಿದೆ. ಈಗ ಗುಜರಾತ್‌ನಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದೆ. ಈಗ ಒಂದು ರೈಲು ಅಪಘಾತದ ಸುದ್ದಿ ಮುಖ್ಯಾಂಶಗಳಿಂದ ಮಾಯವಾಗುವುದಿಲ್ಲ. ಜೊತೆಗೆ ಇನ್ನೊಂದು ರೈಲು ಅಪಘಾತ ಸಂಭವಿಸಿದೆ. ಆದರೆ, ವಿಚಿತ್ರವೆಂದರೆ ಪ್ರತಿದಿನ ರೈಲ್ವೆ ಅಪಘಾತಗಳು ಸಂಭವಿಸಿದರೂ ಪ್ರಧಾನಿ ಮತ್ತು ರೈಲ್ವೆ ಸಚಿವರು ಇತ್ತ ಗಮನಹರಿಸುತ್ತಿಲ್ಲ" ಎಂದು ಎಎಪಿ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ತೀವ್ರ ಆರೋಪಿಸಿದೆ.