ಬೆಂಗಳೂರು: ನನಗೆ ಬರುವ ನೋಟಿಸ್ ಓದಲು ಮಗನಿಗೆ ಕಾನೂನು ಓದಿಸುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ “ಭಾರತದ ಸಂವಿಧಾನ ಅಂಗೀಕಾರ ದಿನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ವಕೀಲನಾಗಬೇಕು ಎಂದು ಆಸೆ ಇತ್ತು. ಆ ಸಮಯದಲ್ಲಿ ನನಗೆ ಪಕ್ಷದ ವತಿಯಿಂದ ಟಿಕೆಟ್ ನೀಡಲಾಗಿತ್ತು. ದೇವರಾಜ ಅರಸು ಹಾಗೂ ಗುಂಡೂರಾವ್ ಅವರ ಕಾಲದಲ್ಲಿ ವಿದ್ಯಾರ್ಥಿ ನಾಯಕತ್ವಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ನಾನು ವಕೀಲನಾಗಲಿಲ್ಲ. ಆದರೆ, ನನಗೀಗ ದಿನನಿತ್ಯ ಇಡಿ, ಆದಾಯ ತೆರಿಗೆ, ಸಿಬಿಐ ನೋಟಿಸ್ ಬರುತ್ತಿವೆ. ನನ್ನ ಕೈತುಂಬಾ ಈ ಸಂಸ್ಥೆಗಳ ನೋಟಿಸ್ಗಳಿವೆ. ಈ ನೋಟಿಸ್ಗಳನ್ನು ಓದಬೇಕು ಎಂಬ ಕಾರಣಕ್ಕೆ ನನ್ನ ಮಗನಿಗೆ ಕಾನೂನು ವ್ಯಾಸಂಗ ಮಾಡಿಸುತ್ತಿದ್ದೇನೆ ಎಂದು ತಿಳಿಸಿದರು.
ಬಿಜೆಪಿಯವರು ಸಮಾಜ ಇಬ್ಭಾಗ ಮಾಡುತ್ತಾರೆ: ಬಿಜೆಪಿಯವರು ಕತ್ತರಿಯಂತೆ ಸಮಾಜವನ್ನು ಇಬ್ಭಾಗ ಮಾಡುತ್ತಾರೆ. ಕಾಂಗ್ರೆಸ್ ಸೂಜಿಯಂತೆ ಸಮಾಜವನ್ನು ಪರಸ್ಪರ ಬೆಸೆಯುತ್ತದೆ. ಇದು ಕಾಂಗ್ರೆಸ್ ಪಕ್ಷದ ಶಕ್ತಿ. ಇಂದಿರಾ ಗಾಂಧಿ ಸಂವಿಧಾನದಲ್ಲಿ ಸಮಾಜವಾದ ಹಾಗೂ ಜಾತ್ಯತೀತ ತತ್ವ ಪದಗಳನ್ನು ಸೇರಿಸಿದ್ದರು. ಇದರ ವಿರುದ್ಧ ಅನೇಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಸೋಮವಾರವಷ್ಟೇ ಆದೇಶ ಹೊರಡಿಸಿದ್ದು, ಈ ಪದಗಳನ್ನು ಸಂವಿಧಾನದಿಂದ ತೆಗೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಸಂವಿಧಾನಕ್ಕೆ ಅಪಾಯವಿದೆ ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಈ ವಿಚಾರವಾಗಿ ಪ್ರಬುದ್ಧವಾಗಿ ವಾದ ಮಂಡಿಸಿದ್ದಾರೆ ಎಂದರು.
ನಮ್ಮ ದೇಶದಲ್ಲಿ ಮುಕ್ಕೋಟಿ ದೇವರನ್ನು ಪೂಜಿಸುತ್ತೇವೆ. ಸ್ವಾತಂತ್ರ್ಯ ಬಂದ ನಂತರ ನಾವು ಮಹಾತ್ಮಾ ಗಾಂಧಿ ಅವರನ್ನು ರಾಷ್ಟ್ರಪಿತ ಎಂದು ಕರೆದು, ಅವರಿಗೆ ಗೌರವ ನೀಡುತ್ತಿದ್ದೇವೆ. ಈ ಸಂವಿಧಾನ ಜಾರಿಯಾದ ನಂತರ ದೇಶದೆಲ್ಲೆಡೆ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಿ ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ರಾಮನ ತಂದೆ ದಶರಥ ಮಹಾರಾಜನ ದೇವಾಲಯವಿಲ್ಲ, ಆದರೆ ರಾಮನ ಭಂಟ ಹನುಮಂತನ ದೇವಾಲಯ ಹೆಚ್ಚಾಗಿದೆ. ಸೇವೆ ಮಾಡುವವರಿಗೆ ಸಮಾಜ ಗುರುತಿಸಲಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.
ಪಕ್ಷದ ಇತಿಹಾಸವೇ ನಮ್ಮ ಶಕ್ತಿ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹದೇವಪ್ಪ ಅವರು ಸಮಾಜಕಲ್ಯಾಣ ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಶಾಲಾ ಮಕ್ಕಳಿಗೆ ಸಂವಿಧಾನ ಪೀಠಿಕೆ ಓದಿಸುವ ಕಾರ್ಯಕ್ರಮ ತಂದಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮಾಡುವಾಗ ಸಂವಿಧಾನ ಪೀಠಿಕೆ ಓದಿ, ಪ್ರತಿಜ್ಞೆ ತೆಗೆದುಕೊಂಡಿದ್ದೆ ಎಂದು ತಿಳಿಸಿದರು.
ಇಂತಿಹಾಸ ಮರೆತವ, ಇತಿಹಾಸ ಸೃಷ್ಟಿಸಲಾರ ಎಂದು ಅಂಬೇಡ್ಕರ್ ಹೇಳಿದ್ದಾರೆ. ಕಾಂಗ್ರೆಸಿಗರಿಗೆ ಪಕ್ಷದ ಇತಿಹಾಸವೇ ದೊಡ್ಡ ಶಕ್ತಿ. ನಮಗೆ ಇರುವ ಇತಿಹಾಸ ಬೇರೆ ಯಾರಿಗೂ ಇಲ್ಲ. ಬಿಜೆಪಿಯವರಿಗೆ ನಮ್ಮ ರೀತಿ ತ್ಯಾಗ ಬಲಿದಾನದ ಇತಿಹಾಸವಿಲ್ಲ. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಕೂಡ ದೇಶಕ್ಕಾಗಿ 2 ಬಾರಿ ಪ್ರಧಾನಮಂತ್ರಿ ಹುದ್ದೆಯನ್ನು ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಕಷ್ಟಕಾಲದಲ್ಲಿದ್ದಾಗ ನಮ್ಮ ಒತ್ತಾಯದ ಮೇರೆಗೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ನಂತರ 2 ಅವಧಿಗೆ ಯುಪಿಎ ಸರ್ಕಾರ ರಚಿಸಿ ದೇಶದ ಆರ್ಥಿಕ ತಜ್ಞನನ್ನು ಪ್ರಧಾನಮಂತ್ರಿಯನ್ನಾಗಿ ಮಾಡುತ್ತಾರೆ. ರಾಹುಲ್ ಗಾಂಧಿ ಕೂಡ ಮಂತ್ರಿಯಾಗಬಹುದಿತ್ತು, ಪ್ರಧಾನಮಂತ್ರಿಯಾಗಬಹುದಿತ್ತು. ಅವರೂ ಕೂಡ ತ್ಯಾಗ ಮಾಡಿದ್ದಾರೆ ಎಂದರು.
ನೀನು ಸಿಖ್, ಜಾಟ್, ರಜಪೂತ ಯಾರೇ ಆಗಿದ್ದರು ಮೊದಲು ನೀನು ಭಾರತೀಯನಾಗಿರು ಎಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಹೇಳಿದ್ದಾರೆ. ಇಂದಿನ ಪೀಳಿಗೆಯ ಯುವಕರು ಬಹಳ ಬುದ್ಧಿವಂತರಾಗಿದ್ದಾರೆ. ಕಾನೂನು ವಿಭಾಗದಲ್ಲಿ ಯುವಕರಿಗೆ ಆದ್ಯತೆ ನೀಡಲು ಈ ಕಾರ್ಯಕ್ರಮ ರೂಪಿಸಲಾಗಿದೆ. ನಮಗೆ ಹೋರಾಟಗಾರರು ಬೇಕು. ಕಾನೂನು ವಿಭಾಗದವರು ಕೂಡ ಹೋರಾಟಗಾರರಾಗಿರಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಮಾತ್ರ ಭವಿಷ್ಯ ಎಂದು ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ನಂಬಿದ್ದಾರೆ : ಡಿಸಿಎಂ ಡಿ ಕೆ ಶಿವಕುಮಾರ್