ಸಿರೋಹಿ (ರಾಜಸ್ಥಾನ) : ಜಿಲ್ಲೆಯ ಅಬು ರೋಡ್ ರೈಲು ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ಭಾರೀ ಅವಘಡವೊಂದು ತಪ್ಪಿದೆ. ಸಾಬರಮತಿ-ದೌಲತ್‌ಪುರ್ ಎಕ್ಸ್‌ಪ್ರೆಸ್ ರೈಲು ಅಬು ರಸ್ತೆಯ ಫ್ಲಾಟ್ಫಾರ್ಮ್ನಲ್ಲಿ ನಿಂತಿದ್ದಾಗ ರೈಲಿನ ಕೋಚ್ ಸಂಖ್ಯೆ ಎ-1 ರ ಎಸಿ ಪ್ಯಾನೆಲ್‌ನಿಂದ ಹೊಗೆ ಬರಲು ಪ್ರಾರಂಭಿಸಿದೆ. ಈ ವೇಳೆ, ಪ್ರಯಾಣಿಕರು ಅಟೆಂಡರ್ ಮತ್ತು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರೈಲಿನಲ್ಲಿದ್ದ ಅಗ್ನಿಶಾಮಕ ವ್ಯವಸ್ಥೆಯನ್ನು ಬಳಸಿಕೊಂಡು ಸಿಬ್ಬಂದಿ ಮತ್ತು ರೈಲ್ವೆ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ.
''ರೈಲ್ವೇ ಅಧಿಕಾರಿಗಳೊಂದಿಗೆ ಆರ್‌ಪಿಎಫ್ ಮತ್ತು ಜಿಆರ್‌ಪಿ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಪುರಸಭೆಯಿಂದ ಅಗ್ನಿಶಾಮಕ ದಳದ ವಾಹನವನ್ನೂ ಸ್ಥಳಕ್ಕೆ ಕರೆಸಲಾಗಿದೆ. ಸೂಕ್ತ ಸಮಯಕ್ಕೆ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು ಅದೃಷ್ಟ. ಬೆಂಕಿ ಮತ್ತು ಹೊಗೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂಬುದು ತಿಳಿದುಬಂದಿದೆ. ಸಬರಮತಿಯಿಂದ ದೌಲತ್‌ಪುರಕ್ಕೆ ಹೋಗುತ್ತಿದ್ದ ರೈಲು ಫ್ಲಾಟ್ಫಾರ್ಮ್ನಲ್ಲಿ ನಿಂತಾಗ ಅದರ ಎಸಿ ಕೋಚ್‌ನಿಂದ ಹೊಗೆ ಬರಲಾರಂಭಿಸಿತ್ತು'' ಎಂದು ಜಿಆರ್‌ಪಿ ಪೊಲೀಸ್ ಠಾಣಾಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.
ಕೋಚ್‌ನಿಂದ ಹೊರಬಂದ ಪ್ರಯಾಣಿಕರು : ರೈಲಿನ ಎ-1 ಕೋಚ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಕೋಚ್‌ನಲ್ಲಿ ಗದ್ದಲ ಉಂಟಾಗಿದೆ. ಈ ವೇಳೆ ರೈಲಿನಲ್ಲಿದ್ದ ಜನರು ತರಾತುರಿಯಲ್ಲಿ ಫ್ಲಾಟ್ಫಾರ್ಮ್ಗೆ ಇಳಿದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ರೈಲು ಅಪಘಾತ: ಸಮಯ ಪ್ರಜ್ಞೆ ಮೆರೆದು ಹಲವು ಜನರ ಪ್ರಾಣ ಉಳಿಸಿದ ಚಹಾ ಮಾರುವ ವ್ಯಕ್ತಿ - Jharkhand Train Accident