ಹೈದರಾಬಾದ್: ಕಾರಿನೊಳಗಡೆ ಕಾಲಿನಡಿ ಬಿಸಾಡಲಾದ ನೀರಿನ ಬಾಟಲಿಗಳಿಂದ ಅದೇನು ಆಗುತ್ತೆ ಎಂದು ಅಸಡ್ಡೆ ಮಾಡಬೇಡಿ, ಅದೇನೂ ಮಾಡೀತು ಅಂತಾ ಭಾವಿಸಿದರೆ ಅದು ತಪ್ಪಾದೀತು ಜೋಕೆ! ಅವು ನಿಮ್ಮ ಪ್ರಾಣಕ್ಕೂ ಕುತ್ತು ತರಬಲ್ಲವು ಎಂಬುದು ಗೊತ್ತಿರಲಿ. ಅದು ಹೇಗೆಂದು ನೋಡೋಣ ಬನ್ನಿ.
ಆಸನಗಳ ಕೆಳಗೆ ಅಥವಾ ನೆಲದ ಮೇಲೆ ಸಡಿಲವಾಗಿ ಬಿಟ್ಟಾಗ ಬಾಟಲಿಗಳು ಪೆಡಲ್ ಗಳ ಕೆಳಗೆ ಉರುಳಿ ಬರಬಹುದು. ಒಂದೊಮ್ಮೆ ಹೀಗಾದಲ್ಲಿ ಆ ಬಾಟಲಿ ಆಕ್ಸಿಲರೇಟರ್, ಬ್ರೇಕ್ ಅಥವಾ ಕ್ಲಚ್ ಪೆಡಲ್ ಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಹುದು. ಇದರಿಂದ ಚಾಲಕ ಡ್ರೈವಿಂಗ್ ಮೇಲೆ ನಿಯಂತ್ರಣ ಕಳೆದುಕೊಳ್ಳಬಹುದು ಮತ್ತು ಮಾರಣಾಂತಿಕ ಅಪಘಾತವೂ ಸಂಭವಿಸಬಹುದು.
ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ ಹೇಳುವುದಿಷ್ಟು:ಈ ಬಗ್ಗೆ ಮಾಹಿತಿ ನೀಡಿದ ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ನವೀನ್ ಗುಪ್ತಾ, "ನಾವು ಎಲ್ಲಾ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು ಮತ್ತು ಚಾಲನೆಯ ಸಮಯದಲ್ಲಿ ಅಡೆತಡೆಗಳನ್ನು ಉಂಟುಮಾಡುವ ವಸ್ತುಗಳನ್ನು ತೆರವುಗೊಳಿಸಬೇಕು. ವಿಶೇಷವಾಗಿ ಚಾಲಕನ ಆಸನದ ಬಳಿಯ ಖಾಲಿ ಬಾಟಲಿಗಳು ಮತ್ತು ಬಟ್ಟೆಗಳನ್ನು ತೆರವುಗೊಳಿಸಬೇಕು" ಎಂದು ಹೇಳಿದರು.
ಬ್ರೇಕ್ ಕೆಳಗೆ ವಾಟರ್ ಬಾಟಲ್ ಸಿಲುಕಿ ಇತ್ತೀಚೆಗೆ ಸಂಭವಿಸಿತ್ತು ಭಾರಿ ಅಪಘಾತ:ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನವೆಂಬರ್ 12 ರಂದು ಟೊಯೊಟಾ ಇನ್ನೋವಾ ಕಾರು ಅಪಘಾತಕ್ಕೀಡಾಗಿ ಆರು ಯುವಕರು ಪ್ರಾಣ ಕಳೆದುಕೊಂಡ ನಂತರ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಬಾಟಲಿ ಸೇರಿದಂತೆ ಇಂಥ ಸಡಿಲವಾಗಿ ಚಲಿಸುವ ವಸ್ತುಗಳ ಬಗೆಗಿನ ಚರ್ಚೆ ಮುನ್ನೆಲೆಗೆ ಬಂದಿದೆ.
ಸಾಮಾನ್ಯವಾಗಿ ಇದನ್ನು ಡೆಹ್ರಾಡೂನ್ ಇನ್ನೋವಾ ಅಪಘಾತ ಎಂದು ಕರೆಯಲಾಗುತ್ತಿದೆ. ಕಾರಿನಲ್ಲಿ ಬಿಸಾಡಿದ್ದ ನೀರಿನ ಬಾಟಲ್ವೊಂದು ಬ್ರೇಕ್ ಪೆಡಲ್ ಅಡಿಯಲ್ಲಿ ಸಿಲುಕಿದ್ದು, ಇದರಿಂದ ಅಕ್ಸಿಲರೇಟರ್ ಫೇಲ್ ಆಗಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಟೊಯೊಟಾ ಇಂಡಿಯಾದ ತಂಡವು ನಡೆಸಿದ ತಾಂತ್ರಿಕ ತನಿಖೆಯನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ಅತಿಯಾದ ವೇಗ ಮತ್ತು ಅದರ ಪರಿಣಾಮವಾಗಿ ಅಪಘಾತಕ್ಕೆ ಕಾರಣವಾದ ಸಂದರ್ಭಗಳನ್ನು ಟೊಯೊಟಾ ಇಂಡಿಯಾ ತಂಡ ಬಹಿರಂಗಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಗ್ಗೆ ಶಾಕಿಂಗ್ ವಿಷಯ ತಿಳಿಸಿದ ಪೊಲೀಸರು:ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡೆಹ್ರಾಡೂನ್ ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ ಪಿ) ಅಜಯ್ ಸಿಂಗ್, ನೀರಿನ ಬಾಟಲಿ ಸಿಲುಕಿ ಬ್ರೇಕಿಂಗ್ ಫೇಲ್ ಆಗಿರಬಹುದು ಮತ್ತು ಇದು ಮಾರಣಾಂತಿಕ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಹೇಳಿದರು.
ಕಾರಿನಲ್ಲಿ ಬಾಟಲಿಗಳ ಅಪಾಯ: ದೀರ್ಘ ಪ್ರಯಾಣದ ಸಮಯದಲ್ಲಿ ಕುಡಿಯುವ ನೀರಿನ ಅಗತ್ಯತೆಗಾಗಿ ನೀರಿನ ಬಾಟಲಿಯನ್ನು ಇಟ್ಟುಕೊಳ್ಳುವುದು ಅತ್ಯಗತ್ಯ. ಆದಾಗ್ಯೂ, ಬಾಟಲಿಗಳನ್ನು ಕಾರಿನಲ್ಲಿ ಎಲ್ಲೆಂದರಲ್ಲಿ ಬಿಸಾಕಿದರೆ ಗಂಭೀರ ಅಪಾಯ ಎದುರಾಗುವುದು ಖಂಡಿತ. ಈ ಅಪಾಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ. ಇಂಥ ಅಪಘಾತ ತಡೆಗಟ್ಟುವುದು ಹೇಗೆ ಮತ್ತು ಅಂಥ ಅಪಾಯ ಎದುರಾದರೆ ಏನು ಮಾಡಬೇಕು ಎಂಬುದನ್ನು ತಿಳಿಯೋಣ.
ಬಾಟಲಿಯು ಅಪಘಾತಕ್ಕೆ ಹೇಗೆ ಕಾರಣವಾಗಬಹುದು: ಅಸುರಕ್ಷಿತ ನೀರಿನ ಬಾಟಲಿಯು ಕಾರಿನ ಫುಟ್ ಬೋರ್ಡ್ ಮೇಲೆ ಸುಲಭವಾಗಿ ಉರುಳಬಹುದು. ಅದು ಆಕ್ಸಿಲರೇಟರ್ ಅಥವಾ ಬ್ರೇಕ್ ಪೆಡಲ್ ಅಡಿಯಲ್ಲಿ ಸಿಲುಕಿಕೊಂಡರೆ, ಚಾಲಕ ವಾಹನದ ನಿಯಂತ್ರಣವನ್ನು ಕಳೆದುಕೊಳ್ಳಬಹುದು.
ನಿಯಂತ್ರಣದ ನಷ್ಟ: ಬ್ರೇಕ್ ಪೆಡಲ್ ಅಡಿ ಬಾಟಲಿ ಸಿಲುಕಿದರೆ ಪೆಡಲ್ ಅನ್ನು ಸಂಪೂರ್ಣವಾಗಿ ಒತ್ತಲು ಸಾಧ್ಯವಾಗದಿರಬಹುದು. ಇದರಿಂದ ಪಡೆಲ್ ನಿಷ್ಕ್ರಿಯವಾಗಬಹುದು.
ನಿಯಂತ್ರಣದಲ್ಲಿ ವಿಳಂಬ: ಬಾಟಲಿ ಪೆಡಲ್ ಸಿಲುಕಿದಾಗ ಅದನ್ನು ತೆಗೆಯಲು ಪ್ರಯತ್ನಿಸಿದಾಗ ಅಥವಾ ಅದನ್ನು ಮುರಿಯಲು ಪ್ರಯತ್ನಿಸಿದಾಗ ಚಾಲನೆಯ ಮೇಲೆ ನಿಯಂತ್ರಣ ಕಳೆದುಕೊಳ್ಳಲು ಕಾರಣವಾಗಬಹುದು. ಅಪಘಾತ ತಡೆಯಲು ಪ್ರತಿಯೊಂದು ಮಿಲಿಸೆಕೆಂಡ್ ಕೂಡ ಲೆಕ್ಕಕ್ಕೆ ಬರುತ್ತದೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಸಾರಿಗೆ ವ್ಯವಹಾರದ ಮಾಲೀಕ ಗುಂಜೀತ್ ಸಿಂಗ್ ಸಂಘಾ, "ಚಾಲನೆಯ ಸಮಯದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಚಾಲಕರು ಎಲ್ಲಾ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಬ್ರೇಕ್, ಕ್ಲಚ್ ಅಥವಾ ರೇಸ್ ಲಿವರ್ ಬಳಸಲು ಯಾವುದೇ ಅಡೆತಡೆಗಳನ್ನು ಉಂಟುಮಾಡುವ ಡ್ರೈವಿಂಗ್ ಸೀಟ್ ಬಳಿ ಸಡಿಲವಾದ ವಸ್ತುಗಳನ್ನು ಎಂದಿಗೂ ಇಡಬಾರದು" ಎಂದು ಹೇಳಿದರು.
ನಿಜ ಜೀವನದ ಉದಾಹರಣೆಗಳು: 2024 ರಲ್ಲಿ ಡೆಹ್ರಾಡೂನ್ ಇನ್ನೋವಾ ಅಪಘಾತ: ಇತ್ತೀಚೆಗೆ, ನವೆಂಬರ್ 12 ರಂದು ಮುಂಜಾನೆ 2 ಗಂಟೆ ಸುಮಾರಿಗೆ ಡೆಹ್ರಾಡೂನ್ ನ ಥಾನಾ ಕಂಟೋನ್ಮೆಂಟ್ ಪ್ರದೇಶದಲ್ಲಿ ಒಎನ್ಜಿಸಿ ಜಂಕ್ಷನ್ ಬಳಿ ಟೊಯೊಟಾ ಇನ್ನೋವಾ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಆರು ಯುವಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು 19 ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ.