ನವದೆಹಲಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕರು, ಸಂಸದರ ಭ್ರಷ್ಟಾಚಾರ ಪ್ರಕರಣಗಳು ಸುದೀರ್ಘ ತಡೆಯಲ್ಲಿದ್ದು, ಇದನ್ನು ಸುಪ್ರೀಂ ಕೋರ್ಟ್ ಗಮನಿಸಿ, ಅವುಗಳನ್ನು ನೇರ ತ್ವರಿತ ವಿಚಾರಣೆಗೆ ಪರಿಗಣಿಸಬೇಕು ಎಂದು ಬೆಂಗಳೂರು ಮೂಲಕ ವಕೀಲರೊಬ್ಬರು ಭಾರತದ ನೂತನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಬೆಂಗಳೂರು ಮೂಲದ ವಕೀಲ ಸಚಿನ್ ಎಸ್.ದೇಶಪಾಂಡೆ ನ.19ರಂದು ಪತ್ರ ಬರೆದಿದ್ದಾರೆ. 'ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ನಿರ್ವಹಿಸುತ್ತಿರುವ ರೀತಿಯಿಂದ ಸಾಮಾನ್ಯ ನಾಗರಿಕರಿಗೆ ತೋರವ ಬಗ್ಗೆ ಅತ್ಯಂತ ಗೌರವ, ಆಳವಾದ ಕಾಳಜಿಯಿಂದ ಪತ್ರ ಬರೆಯುತ್ತಿದ್ದೇನೆ' ಎಂದು ವಕೀಲರು ಉಲ್ಲೇಖಿಸಿದ್ದಾರೆ.
"ನಿಷ್ಪಕ್ಷಪಾತ ನ್ಯಾಯಕ್ಕೆ ಸುಪ್ರೀಂ ಕೋರ್ಟ್‌ಗಿರುವ ಬದ್ಧತೆಯ ಬಗ್ಗೆ ನನಗಿರುವ ಅಚಲ ನಂಬಿಕೆಯನ್ನು ಆರಂಭದಲ್ಲೇ ಪ್ರಸ್ತಾಪಿಸುತ್ತಿದ್ದೇನೆ. ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣಗಳ ಪೈಕಿ ಕೆಲವು ಮಾದರಿಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಆ ಮಾದರಿಗಳು ನ್ಯಾಯಾಂಗದಲ್ಲಿ ಸಾರ್ವಜನಿಕ ವಿಶ್ವಾಸವನ್ನು ಕಳೆದುಕೊಳ್ಳುತ್ತಿವೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 23, 2022ರಂದು ನೋಟಿಸ್ ನೀಡುವಾಗ, ವಿಶೇಷ ನ್ಯಾಯಾಧೀಶರ ಮುಂದಿದ್ದ ಯಡಿಯೂರಪ್ಪ ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ತಡೆಯನ್ನು ಏಕೆ ನೀಡಲಾಗುತ್ತಿದೆ? ಎಂಬುದರ ಕುರಿತು ಆದೇಶದಲ್ಲಿ ಯಾವುದೇ ಮಾಹಿತಿ ಇಲ್ಲ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
"ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಟ್ರ್ಯಾಕ್ ಮಾಡಿದ್ದೇನೆ. ಅವರ ವಿರುದ್ಧದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಪಕ್ಷಪಾತ ತಾಳಿದಂತೆ ತೋರುತ್ತಿದೆ. ಆದ್ದರಿಂದ ನಿಮ್ಮ ಗಮನಕ್ಕೆ ತರಲು ಈ ವಿಚಾರ ಅರ್ಹವಾಗಿದೆ ಎಂದು ಈ ಮೂಲಕ ಪತ್ರ ಬರೆಯುತ್ತಿದ್ದೇನೆ" ಎಂದಿದ್ದಾರೆ.
"ಪ್ರಕರಣಗಳ ವಿಚಾರಣೆಯ ತಡೆಯಾಜ್ಞೆಗಳು ಹೇಗೆ ನಿರ್ವಹಿಸುತ್ತಿವೆ ಎಂಬುದರಲ್ಲಿ ಅಸಮಾನತೆ ಇದೆ. ಯಡಿಯೂರಪ್ಪನವರು ಅರ್ಜಿ ಸಲ್ಲಿಸಿದಾಗ, ಯಾವುದೇ ಕಾರಣವಿಲ್ಲದೆ ಸುಪ್ರೀಂ ಕೋರ್ಟ್ ತಕ್ಷಣವೇ ತಡೆಯಾಜ್ಞೆ ನೀಡುತ್ತದೆ ಮತ್ತು ಅದು ಅನಿರ್ದಿಷ್ಟವಾಗಿ ಮುಂದುವರಿಯುತ್ತದೆ. ಆದರೂ ಕೂಡ ತನಿಖಾ ಸಂಸ್ಥೆಗಳು ಅಥವಾ ದೂರುದಾರರು, ಯಡಿಯೂರಪ್ಪ ಪರ ಹೈಕೋರ್ಟ್ ಆದೇಶಗಳ ವಿರುದ್ಧ ತಡೆಯಾಜ್ಞೆ ಕೋರಿದರೆ, ಅವುಗಳಿಗೆ ತಡೆಯಾಜ್ಞೆ ಮಂಜೂರಾಗಲ್ಲ ಮತ್ತು ವರ್ಷಗಳವರೆಗೆ ಅದು ಪಟ್ಟಿಯಾಗುವುದೂ ಇಲ್ಲ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.