ನಲ್ಗೊಂಡ (ತೆಲಂಗಾಣ) :ಎಂದಿನಂತೆ ದೈನಂದಿನ ಕೃಷಿ ಚಟುವಟಿಕೆಗೆ ಎಂದು ರೈತರು ತಮ್ಮ ಜಮೀನಿಗೆ ತೆರಳಿದ್ದಾಗ ಅವರಿಗೆ ಅಲ್ಲಿ ಕಂಡು ಬಂದ ದೃಶ್ಯ ಅಚ್ಚರಿ ಮೂಡಿಸಿತ್ತು. ಇದಕ್ಕೆ ಕಾರಣ ಜಮೀನಲ್ಲಿ ಕೇವಲ ಹುಲುಸಾಗಿ ಬೆಳೆದ ಫಸಲು ಮಾತ್ರವಲ್ಲದೆ ನೋಟಿನ ಕಂತೆಗಳು ಸಿಕ್ಕಿದ್ದವು.
ಗ್ರಾಮದಲ್ಲಿ ಹೀಗೆ ನೋಟುಗಳ ಕಂತೆ ಸಿಕ್ಕ ಸುದ್ದಿ ಸಿಕ್ಕಾಪಟ್ಟೆ ವೈರಲ್ ಕೂಡಾ ಆಗಿದೆ. ಈ ಬಗ್ಗೆ ಅಲ್ಲಿನ ಜನರು ಅಚ್ಚರಿ ಕೂಡಾ ವ್ಯಕ್ತಪಡಿಸಿದ್ದರು. ಆದ್ರೆ ಪರಿಶೀಲಿಸಿದಾಗ ಅಲ್ಲಿದ್ದದ್ದು ಅಸಲಿ ನೋಟುಗಳಲ್ಲ, ಬದಲಾಗಿ ನಕಲಿ ನೋಟುಗಳು ಅನ್ನೋದು ಗೊತ್ತಾಗಿದೆ.
ನಲ್ಗೊಂಡ ಜಿಲ್ಲೆಯ ದಮರಚರ್ಲಾ ಮಂಡಲದ ಕೃಷಿ ಜಮೀನಿನಲ್ಲಿ ಈ ರೀತಿಯ ನಕಲಿ ನೋಟುಗಳು ಪತ್ತೆಯಾಗಿವೆ.
ನೋಟಿನ ಕಂತೆ :ನಾರ್ಕಟ್ಪಲ್ಲಿ-ಅದ್ದಂಕಿ ಹೆದ್ದಾರಿ ಬೊಟ್ಟಲಪಾಲೆಂ ಸಮೀಪದ ಜಮೀನಿಗೆ ಬಂದ ರೈತರು ಸೋಮವಾರ ಬ್ಯಾಗ್ವೊಂದನ್ನು ನೋಡಿದ್ದರು. ಈ ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ಕಂತೆ ಕಂತೆಯಾಗಿದ್ದ 500 ರೂ. ನೋಟುಗಳು ಕಂಡಿವೆ. ಅಸಲಿ ನೋಟಿನಂತೆ ಕಂಡ ಈ ನಕಲಿ ನೋಟು ಕುರಿತು ತಕ್ಷಣಕ್ಕೆ ಜಮೀನಿನ ರೈತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.